ಡಿವಿಜಿ ಸುದ್ದಿ,ವಿಜಯಪುರ: ನಾವು ಯಾವುದೇ ರೀತಿಯ ಆಪರೇಷನ್ ಹಸ್ತ ಮಾಡುತ್ತಿಲ್ಲ. ಅದೆಲ್ಲ ಬಿಜೆಪಿಯವರ ಕೆಲಸ. ಆದರೆ, ಪಕ್ಷದ ಸಿದ್ಧಾಂತ ಒಪ್ಪಿ ಬರೋವರೆಗೆ ನಾವು ಬೇಡ ಎನ್ನುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬರೋವರನ್ನು ಮೊದಲು ಬಿಜೆಪಿ ತಡೆಯಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಶುರು ಮಾಡಿದ್ದೆ ಮಿಸ್ಟರ್ ಯಡಿಯೂರಪ್ಪ. 2009ರಲ್ಲಿ ಭಾರೀ ಪ್ರಮಾಣದ ಹಣ ಖರ್ಚು ಮಾಡಿ 15 ಜನರನ್ನು ಖರೀದಿಸಿ ಸರ್ಕಾರ ಮಾಡಿದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಅನೈತಿಕ ರಾಜಕಾರಣ ಬಿಜೆಪಿ ಕೆಲಸ. ಮೊದಲು ಬಿಜೆಪಿ ಬಿಟ್ಟು ಬರುವವರನ್ನು ಮೊದಲು ತಡೆಯಲಿ ಎಂದರು.
ಉಪ ಚುನಾವಣೆಯಲ್ಲಿ ಜೆಡಿಎಸ್ 15 ಕ್ಷೇತ್ರದಲ್ಲಿ ಅಭ್ಯರ್ಥಿ ನಿಲ್ಲಿಸಲಿ. ನಮ್ಮದೇನು ಅಭ್ಯಂತರವಿಲ್ಲ. ಕಾಂಗ್ರೆಸ್ ಈ ಬಾರಿ 15 ಕ್ಷೇತ್ರಗಳಲ್ಲಿ ಕನಿಷ್ಟ 12 ಸೀಟು ಗೆಲ್ಲಲಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಬಾರದು ಎನ್ನುವುದು ಸುಳ್ಳು. ಎಲ್ಲವನ್ನು ಹೈಕಮಾಂಡ್ ತೀರ್ಮಾನಿಸಿತ್ತು. ದೇವೇಗೌಡರು ಹೈಕಮಾಂಡ್ ಜತೆ ಮಾತನಾಡುವಾಗ ನಾನು ಅಲ್ಲಿರಲಿಲ್ಲ. ಹೀಗಾಗಿ ನಾನು ವಿರೋಧಿಸಿದ್ದೆ ಎಂದು ಹೇಗೆ ಹೇಳ್ತೀರಿ ? ಕೋಮುವಾದಿ ಸರ್ಕಾರ ಬರಬಾರದು ಎಂದು ಹೈಕಮಾಂಡ್ ಹೇಳಿತ್ತು. ಅದರಂತೆ ಜೆಡಿಎಸ್ ಜತೆ ಸೇರಿ ಸರ್ಕಾರ ಮಾಡಿದೆವು ಎಂದು ತಿಳಿಸಿದರು.



