ಡಿವಿಜಿ ಸುದ್ದಿ ಬೆಂಗಳೂರು: ಬಿಜೆಪಿ ಸರ್ಕಾರ ಉರುಳಿಸಲ್ಲ ಅಂತಾ ನಿನ್ನೆಯಷ್ಟೇ ಹೇಳಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಇವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದು, ಕುಮಾರ ಸ್ವಾಮಿ ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಹೇಳಿ..? ಬಿಜೆಪಿ ಬೆಂಬಲಿಸುವ ಮೂಲಕ ಕೋಮುವಾದಿಗಳನ್ನು ಬೆಂಬಲಿಸಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಕುಮಾರಸ್ವಾಮಿ ಈ ಹಿಂದೆ ಯಡಿಯೂರಪ್ಪ ಜೊತೆ ಸೇರಿ 2006ರಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದ್ದವರು. ಇಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಅವರ ಹೇಳಿಕೆ ಗಮನಿಸಿದ್ದೇನೆ. ಅವರು ಬಿಜೆಪಿಯನ್ನು ಬೆಂಬಲಿಸುತ್ತಿರುವಂತೆ ಕಾಣುತ್ತಿದೆ. ಈ ಮೂಲಕ ಕೋಮುವಾದಿಗಳನ್ನು ಅವರು ಬೆಂಬಲಿಸುತ್ತಿದ್ದಾರೆ.
ನಾನು ಬಿಜೆಪಿ ಸರ್ಕಾರವನ್ನು ಉರುಳಿಸುತ್ತೇನೆ ಎಂದು ಹೇಳಿಲ್ಲ. ಆದರೆ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆದ್ದರೆ ಬಿಜೆಪಿ ಸರ್ಕಾರ ಉರುಳುತ್ತದೆ. ಆಗ ನಾವು ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ಬೆಳಗಾವಿಯಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಸರ್ಕಾರ ಬೀಳುತ್ತದೆ ಎಂದು ಪದೇಪದೇ ಹೇಳುತ್ತಿದ್ದಾರೆ. ಆದರೆ, ನಾವು ಈ ಸರ್ಕಾರ ಬೀಳಿಸುವ ಪ್ರಯತ್ನ ಮಾಡಲ್ಲ ಆ ಆತುರವೂ ನನಗಿಲ್ಲ ಎಂದಿದ್ದರು.



