ಡಿವಿಜಿ ಸುದ್ದಿ, ಮೈಸೂರು: ಕೋವಿಡ್–19 ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸರ್ಕಾರದ ವಿರುದ್ಧ ಆರೋಪಿಸಿದ್ದಕ್ಕೆ ನೋಟಿಸ್ ನೀಡಿದ್ದಾರೆ. ಯಾವನೋ ರವಿಕುಮಾರ್ ಅಂತೆ. ಅವನ ಕೈನಲ್ಲಿ ನೋಟಿಸ್ ಕೊಡಿಸಿದ್ದಾರೆ. ನಾನು ಲಾಯರ್, ನೋಟಿಸ್ ಬಂಡವಾಳ ಗೊತ್ತಿದೆ. ಇದಕ್ಕೆಲ್ಲ ಡೋಂಟ್ ಕೇರ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬಿಜೆಪಿ ನೋಟಿಸ್ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಈ ರೀತಿ ಹೇಳಿದ್ದಾರೆ. ಇನ್ನು ದುಬಾರಿ ವಾಚ್ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪ್ರಕರಣದ ವಿಚಾರಣೆ ನಡೆಸಿದ ಎಸಿಬಿ ಕ್ಲೀನ್ ಚಿಟ್ ಕೊಟ್ಟಿದೆ. ನನಗೆ ಯಾರೋ ಗಿಫ್ಟ್ ಕೊಟ್ಟಿದ್ದ ವಾಚನ್ನು ಸರ್ಕಾರಕ್ಕೇ ವಾಪಸ್ ಕೊಟ್ಟಿರುವೆ. ಬಿಜೆಪಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ನಾನು ಯಡಿಯೂರಪ್ಪ ಅವರ ಹಳೆಯ ಪ್ರಕರಣ ತೆಗೆಯಬೇಕಾ, ನಾನೇನು ಸರ್ಕಾರದ ದುಡ್ಡಿನಿಂದ ವಾಚ್ ತೆಗೆದುಕೊಂಡಿದ್ದೇನಾ? ಸರ್ಕಾರದಿಂದ ಲೂಟಿ ಮಾಡಿದ ದುಡ್ದಿನಿಂದ ವಾಚ್ ಖರೀದಿಸಿದ್ದೇನಾ? ಎಂದು ತಿರುಗೇಟು ನೀಡಿದರು. ಆ ವಾಚನ್ನು ಯಾರೋ ಕೊಟ್ಟಿದ್ದರು. ಅದಕ್ಕೆ ಅವರು ಅಫಿಡವಿಟ್ ಸಹ ಕೊಟ್ಟಿದ್ದಾರೆ ಎಂದರು.
ಡಿ.ಕೆ. ಶಿವಕುಮಾರ್ ತಪ್ಪಿತಸ್ಥರಲ್ಲ. ಅವರ ವಿರುದ್ಧ ಇರುವುದು ಜಾರಿ ನಿರ್ದೇಶನಾಲಯದ ಪ್ರಕರಣ. ನ್ಯಾಯಾಲಯ ಜಾಮೀನು ಕೊಟ್ಟಿದೆ. ಬಿಜೆಪಿಗರಿಗೆ ನೈತಿಕತೆ ಇದೆಯಾ..? ರಾಜಕೀಯ ದುರುದ್ದೇಶದ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.



