ಡಿವಿಜಿ ಸುದ್ದಿ, ಬೆಂಗಳೂರು: ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದೆ. ಕ್ಯಾಬಿನೆಟ್‍ನಲ್ಲಿ ತಿದ್ದುಪಡಿಗೆ ನಾವು ವಿರೋಧ ಮಾಡಿದ್ದೇವು. ಕೊರೊನಾ ವೈರಸ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲ್ಲ ಎಂದು ಅಂದುಕೊಂಡಿದ್ದೆ. ಆದರೆ, ಈ ಸಂದರ್ಭ ಬಳಸಿಕೊಂಡ ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರ ವಿರುದ್ಧ ಕಿರಿಕಾರಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಕರ್ನಾಟಕಕ್ಕೆ ಕರಾಳ ದಿನ. ಈ ಕಾಯ್ದೆ ರೈತರ, ಕೂಲಿ ಕಾರ್ಮಿಕರ, ಹಿಂದುಳಿದವರ ವಿರೋಧಿ ತಿದ್ದುಪಡಿ ಎಂದರು.
ಕೋರ್ಟ್ ನಲ್ಲಿ 13,814 ಪ್ರಕರಣಗಳು ಬಾಕಿಇದ್ದವು. ಸುಗ್ರೀವಾಜ್ಞೆಯಿಂದ ಎಲ್ಲ ಪ್ರಕರಣಗಳು ವಜಾ ಆಗುತ್ತವೆ. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಚು ಕೇಸ್‍ಗಳು ದಾಖಲಾಗಿದ್ದು, 45-50 ಸಾವಿರ ಕೋಟಿ ರೂಪಾಯಿ ಬೆಳೆಬಾಳುವ ಜಮೀನಿನ ಕೇಸ್ ವಜಾ ಮಾಡಿದ್ದಾರೆ ಎಂದು ಆರೋಪಿಸಿದರು.
ಒಂದು ಕುಟುಂಬಕ್ಕೆ ಇದ್ದ 118 ಎಕರೆ ಮಿತಿಯನ್ನು 436 ಎಕರೆಗೆ ಹೆಚ್ಚಿಸಿದ್ದಾರೆ. 436 ಎಕರೆ ಯಾರು ತೆಗೆದುಕೊಳ್ತಾರೆ? ರೈತರು ಅಷ್ಟು ಜಮೀನು ತೆಗೆದುಕೊಳ್ತಾರಾ? ಇದರಿಂದ ಬಂಡವಾಳಶಾಹಿಗಳಿಗೆ ಅನುಕೂಲ ಆಗಲಿದೆ. ಇಡೀ ರೈತ ಸಮುದಾಯ ನಾಶ ಮಾಡಲು ಸರ್ಕಾರ ಹೊರಟಿದೆ. ಎಲ್ಲರೂ ಕಾರ್ಪೋರೆಟ್ ಸಂಸ್ಥೆಗಳ ಬಾಗಿಲು ಕಾಯಬೇಕಾದ ಸ್ಥಿತಿ ಬರುತ್ತೆ. ಬಂಡಾವಳಶಾಹಿಗಳು ಭೂಮಿ ತಗೊಂಡು ರಿಯಲ್ ಎಸ್ಟೇಟ್ ಮಾಡ್ತಾರೆ. ಆಗ ಆಹಾರ ಉತ್ಪಾದನೆ ಎಲ್ಲಿ ಆಗುತ್ತೆ ಎಂದು ಪ್ರಶ್ನಿಸಿದರು.
ಅಂಬಾನಿ, ಅದಾನಿ ಕೃಷಿ ಮಾಡ್ತಾರ? ರಿಯಲ್ ಎಸ್ಟೇಟ್ ಮಾಡ್ತಾನೆ ಇದು ಗಣಿ ಹಗರಣಕ್ಕಿಂತ ದೊಡ್ದ ಹಗರಣ. ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ತೆಗೆದುಕೊಂಡು ರೈತರ ಭೂಮಿಯನ್ನು ಕೊಡುತ್ತಿದ್ದಾರೆ ಎಂದರು.



