ಡಿವಿಜಿ ಸುದ್ದಿ, ಮೈಸೂರು: ಎಚ್.ವಿಶ್ವನಾಥ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವುದು ಕಾನೂನುಬಾಹಿರ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿದರು.
ಅವರ ಅನರ್ಹತೆ ಕುರಿತು ವಿಚಾರಣೆ ನಡೆಸಿ ಸುಪ್ರೀಂಕೋರ್ಟ್, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವವರೆಗೆ ಅಥವಾ ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೆ ಸಾಂವಿಧಾನಿಕ ಅಧಿಕಾರ ಹೊಂದುವಂತಿಲ್ಲ ಎಂದು ಹೇಳಿತ್ತು. ಆದರೆ, ರಾಜ್ಯ ಸರ್ಕಾರ ವಿಶ್ವನಾಥ್ ಅವರನ್ನು ನಾಮನಿರ್ದೇಶನ ಮಾಡುವ ಮೂಲಕ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಮಾಡಿದೆ ೆಂದು ಆರೋಪ ಮಾಡಿದರು.
ವಿಶ್ವನಾಥ್ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರೆ ಪ್ರಶ್ನಿಸುತ್ತಿರಲಿಲ್ಲ. ನಾಮನಿರ್ದೇಶನ ಆಯ್ಕೆ ಮಾಡಲಾಗಿದೆ. ಅವರು ಪ್ರತಿಜ್ಞಾವಿಧಿ ಸ್ವೀಕರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಸರ್ಕಾರ ನೀಡಿದ ನಾಮನಿರ್ದೇಶಿತರ ಪಟ್ಟಿಗೆ ಅಂಕಿತ ಹಾಕಿದ ರಾಜ್ಯಪಾಲರು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘನೆ ಮಾಡಿದಂತೆ ಆಗಿದೆ ಎಂದರು
ಈ ಬಗ್ಗೆ ರಾಜ್ಯಪಾಲರು, ಸ್ವೀಕರ್ ಗೆ ಪತ್ರ ಬರೆಯುತ್ತೇವೆ. ಈ ಒಬ್ಬ ದುರಂತ ನಾಯಕ ರಾಜಕೀಯ ಕ್ಷೇತ್ರವನ್ನು ಬಿಟ್ಟು ಸಾಹಿತ್ಯ ಕ್ಷೇತ್ರಕ್ಕೆ ಹೋಗಿರುವುದರಿಂದ ರಾಜಕೀಯ ಕ್ಷೇತ್ರ ಶುಭ್ರವಾಗಲು ಅವಕಾಶ ದೊರೆತಿದೆ. ಆದರೆ, ಸಾಹಿತ್ಯ ಕ್ಷೇತ್ರವನ್ನು ದೇವರೇ ಕಾಪಾಡಬೇಕು ವಿಶ್ವನಾಥ್ ಹೆಸರು ಹೇಳದೆ ವ್ಯಂಗ್ಯವಾಡಿದರು.ರಾಜಕೀಯ ಕ್ಷೇತ್ರದಲ್ಲಿ ಮಾಡಿದಂತೆ ಸಾಹಿತ್ಯ ಕ್ಷೇತ್ರ ಕಲುಷಿತ ಆಗದಿದ್ದರೆ ಸಾಕು ಎಂದರು.



