ಡಿವಿಜಿ ಸುದ್ದಿ, ಬೆಂಗಳೂರು: ಒಂದು ಸ್ಥಾನಕ್ಕೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಭಾಗವಹಿಸುವುದಿಲ್ಲ ಎಂದು ಹೇಳಿಕೊಂಡಿದ್ದವು. ಆದರೆ, ಜೆಡಿಎಸ್ ಶಾಸಕ, ಮಾಜಿ ಸಚಿವ ಜಿ.ಟಿ. ದೇವೇಗೌಡ ಮಾತ್ರ ಮತದಾನ ಮಾಡಿದರು. ಈ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಪ್ರಶ್ನೆ ಮಾಡಿದಕ್ಕೆ ಜಿ.ಟಿ. ದೇವೇಗೌಡರು ಜೆಡಿಎಸ್ ನಲ್ಲಿ ಇದ್ದಾರಾ..? ಅಂತ ಮಾಧ್ಯಮದವರನ್ನೇ ಮರು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್‌ನವರು ಮತದಾನದಲ್ಲಿ ಭಾಗವಹಿಸಲ್ಲ ಅಂತ ಹೇಳಿದ್ದರು. ನಾವೂ ಕೂಡ ಭಾಗಿಯಾಗಿಲ್ಲ ಎಂದು ಶಾಸಕರಿಗೆ ಸೂಚಿಸಿದ್ದೇವು. ಆದರೆ, ಜಿ.ಟಿ ದೇವೇಗೌಡ ಮತದಾನ ಮಾಡಿದ್ದು ನನಗೆ ಗೊತ್ತಿಲ್ಲ. ಈಗ ಅವರು ನಮ್ಮಲ್ಲಿ ಇದ್ದಾರಾ..? ಅವರು ಹಲವಾರು ಹೇಳಿಕೆಗಳನ್ನು ಕೊಟ್ಟುಕೊಂಡಿದ್ದಾರೆ. ಇಲ್ಲಿರ್ತಾರೋ, ಎಲ್ಲಿರ್ತಾರೋ ಎಂದು ಕಾದು ನೋಡೋಣ. ಮತದಾನದಲ್ಲಿ ಭಾಗವಹಿಸೋದು ಬೇಡ ಎಂದು ಶಾಸಕಾಂಗ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಶಾಸಕಾಂಗ ಪಕ್ಷಕ್ಕೆ ಅಗೌರವ ತೋರುವುದು ಅವರಿಗೆ ಬಿಟ್ಟದ್ದು ಎಂದು ತಿಳಿಸಿದರು.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೊರತುಪಡಿಸಿ ಇತರ ಯಾವ ಶಾಸಕರೂ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ. ಇಂದು ಬೆಳಗ್ಗೆ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಲಾಗಿತ್ತು. ಆದರೆ ಶಾಸಕಾಂಗ ಪಕ್ಷದ ನಿರ್ಧಾರವನ್ನು ಧಿಕ್ಕರಿಸಿ ಜಿ.ಟಿ.ದೇವೇಗೌಡರು ಮತ ಚಲಾಯಿಸಿದರು. ಅನಾರೋಗ್ಯದ ಕಾರಣ ರಾಮದಾಸ್, ಎನ್ ವೈ ಗೋಪಾಲಕೃಷ್ಣ ಹೊರತುಪಡಿಸಿ ಉಳಿದವರು ಮತದಾನ ಮಾಡಿದರು.



