ಡಿವಿಜಿ ಸುದ್ದಿ, ಚಿಕ್ಕಮಗಳೂರು: ಸಂಘ ಪರಿವಾರ ಯಾವುದಾದರೂ ಹತ್ಯೆಯಲ್ಲಿ ಭಾಗಿಯಾಗಿದ್ದರೆ, ನೀವೇ ಐದು ವರ್ಷ ಅಧಿಕಾರದಲ್ಲಿದ್ದಾಗ ಸಂಘ ನಿಷೇಧ ಮಾಡುವ ಶಿಫಾರಸು ಮಾಡಬಹುದಿತ್ತು. ಯಾಕೆ, ಆಗ ಬ್ಯಾಟರಿ ಇರಲಿಲ್ವಾ ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರದವರು ಕೊಲೆ ಆರೋಪಿಗಳು ಎಂದು ಸಿದ್ದರಾಮಯ್ಯ ಮಾಡಿರುವ ಟ್ವೀಟ್‍ಗೆ ಈ ರೀತಿ ತಿರುಗೇಟು ಕೊಟ್ಟಿದ್ಧಾರೆ. ವಯಸ್ಸಾದ ಮೇಲೆ ಪ್ರಬುದ್ಧತೆ ಬರಬೇಕು. ಮನಸ್ಸು ಪಕ್ವ ಆಗಬೇಕು. ಪೂರ್ವಾಗ್ರಹ ಪೀಡಿತ ಮನೋಭಾವದಿಂದ ಹೊರ ಬನ್ನಿ ಎಂದರು.
ನಾನು ಸಂಘದ ಸ್ವಯಂ ಸೇವಕ. ಹಾಗಾಗಿಯೇ ಶಾಸಕ, ಸಚಿವನಾಗಿದ್ದೇನೆ. ಇದೇ ಸಂಘದಿಂದ ನರೇಂದ್ರ ಮೋದಿಯವರು ಪ್ರಧಾನಿಯಾಗಿವುದು. ಸಂಘ ಹೇಳಿಕೊಡುವುದು ದೇಶಭಕ್ತಿ ಹಾಗೂ ಸಂಸ್ಕಾರ ಕಲಿಸುತ್ತದೆ. ಟೀಕೆ ಮಾಡುವವರನ್ನ ಹತ್ಯೆ ಮಾಡಬೇಕು ಎಂದಿದ್ದರೆ ಬಹಳ ಜನ ಭೂಮಿ ಮೇಲೆ ಇರುತ್ತಿರಲಿಲ್ಲ. ಸಂಘ ಹತ್ಯೆ ರಾಜಕಾರಣದ ಮೇಲೆ ನಂಬಿಕೆ ಇಟ್ಟಿಲ್ಲ ಎಂದಿದ್ದಾರೆ.
ನಿಮ್ಮ ಟ್ವಿಟ್ಟರ್ ಖಾತೆ ನಿರ್ವಹಿಸುವವನಿಗೆ ಸ್ವಲ್ಪ ವಾಸ್ತಾವಿಕ ನೆಲೆಗಟ್ಟಿನ ಮೇಲೆ ಟ್ವಿಟ್ ಮಾಡಲು ಹೇಳಿ. ಇಲ್ಲವಾದರೆ ಕಡೆಗಾಲದಲ್ಲಿ ನಿಮಗೂ ಕೆಟ್ಟ ಹೆಸರು ತರುತ್ತಾರೆ. ನಿಮ್ಮ ಮಾಧ್ಯಮ ನಿರ್ವಹಣೆ ಮಾಡಿಕೊಳ್ಳುವಂತಹ ಕೆಲವರು ಹುಟ್ಟುವಾಗಲೇ ಸಂಘದ ದ್ವೇಷಿಯಾಗಿ ಹುಟ್ಟಿದ್ದಾರೆ. ಬೇರೆಯವರ ಕೈಗೆ ನಿಮ್ಮ ಟ್ವಿಟ್ಟರ್ ಕೊಟ್ಟು ನೀವು ಕೆಟ್ಟು ಹೋಗಬೇಡಿ ಎಂದಿದ್ದಾರೆ.



