ಡಿವಿಜಿ ಸುದ್ದಿ, ನವದೆಹಲಿ: ದಿನಕ್ಕೊಂದು ಬೆಳವಣಿಗೆಯಿಂದ ತೀವ್ರ ಕುತೂಹಲ ಮೂಡಿಸಿದ್ದ ಮಹಾರಾಷ್ಟ್ರ ಸರ್ಕಾರ ರಚನೆ ಕಸರತ್ತು ಕೊನೆಗೆ ರಾಷ್ಟ್ರಪತಿ ಆಳ್ವಿಕೆಯಲ್ಲಿ ಅಂತ್ಯವಾಯಿತು.
ಬಿಜೆಪಿ, ಶಿವಸೇನಾ, ಕಾಂಗ್ರೆಸ್-ಎನ್ ಸಿಪಿ ಮೈತ್ರಿಕೂಟ ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನೆಲೆ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರ್ ಮತ್ತು ಕೇಂದ್ರ ಸಚಿವ ಸಂಪುಟ ಮಾಡಿರುವ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಿ ಹಾಕಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಇಂದಿನಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯರು, ಶಿವಸೇನಾ 56 ಸದಸ್ಯರು, ಹಾಗೂ ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ 98 ಸದಸ್ಯರಗಳನ್ನು ಒಳಗೊಂಡಿದೆ. ಯಾವ ಪಕ್ಷವೂ ಸರ್ಕಾರ ರಚನೆಗೆ ಆಸಕ್ತಿ ತೋರದ ಹಿನ್ನೆಲೆ ರಾಷ್ಟ್ರಪತಿ ಆಡಳಿತ ಹೇರಲಾಗಿದೆ.
ಹಲವು ದಶಕಗಳ ಕಾಲ ಬಿಗಿಯಾಗಿದ್ದ ಬಿಜೆಪಿ–ಶಿವಸೇನಾ ಮೈತ್ರಿಕೂಟ ಮುರಿದುಬಿದ್ದ ಹಿನ್ನೆಲೆ ಮಹಾರಾಷ್ಟ್ರ ರಾಜ್ಯ ರಾಜಕೀಯ ಸಾಕಷ್ಟು ಕುತೂಹಲ ಮೂಡಿಸಿತ್ತು. ರಾಜ್ಯಪಾಲರು ಸರ್ಕಾರ ರಚಿಸಲು ಬಿಜೆಪಿಗೆ ನೀಡಿದ್ದ ಆಹ್ವಾನ ತಿರಸ್ಕರಿಸಿದ್ದರಿಂದ ಎರಡನೇ ದೊಡ್ಡ ಪಕ್ಷವಾದ ಶಿವಸೇನಾಗೆ ಅವಕಾಶ ನೀಡಲಾಗಿತ್ತು.
ಶಿವಸೇನಾವೂ ಸರ್ಕಾರ ರಚನೆ ಗಡುವು ಮೀರಿದ್ದರಿಂದ ಮೂರನೇ ದೊಡ್ಡ ಪಕ್ಷವಾದ ಎನ್ ಸಿಪಿಗೆ ಆಹ್ವಾನ ನೀಡಲಾಗಿತ್ತು. ಕೊನೆಗೆ ಎನ್ ಸಿಪಿ ಪಕ್ಷವೂ ಸರ್ಕಾರ ರಚಿಸಲು ವಿಫಲವಾದ ಹಿನ್ನೆಲೆ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸಚಿವ ಸಂಪುಟ ಶಿಫಾರಸು ಮಾಡಿತ್ತು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರಪತಿ ಆಡಳಿತದ ನಿರ್ಧಾರ ಕೈಗೊಳ್ಳಲಾಗಿತ್ತು. ಸರ್ಕಾರ ರಚನೆಗೆ ಇನ್ನಷ್ಟು ಅವಕಾಶ ನೀಡಿಲ್ಲವೆಂದು ಸುಪ್ರೀಂ ಕೋರ್ಟ್ ಮೊರೆ ಹೋಗಲು ಸೇನಾ ನಿರ್ಧರಿಸಿದೆ.



