ಡಿವಿಜಿ ಸುದ್ದಿ, ಬೆಂಗಳೂರು: ಪೊಲೀಸ್ ಕಮಿಷನರೇ ನೀವು ಬಿಜೆಪಿಯ ಏಜೆಂಟ್ ರೀತಿಯಲ್ಲಿ ವರ್ತನೆ ಮಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಿಷ್ಪಕ್ಷಪಾತವಾಗಿ ತನಿಖೆ ಮಾಡಿ. ಸರ್ಕಾರದ ತಾಳಕ್ಕೆ ಕುಣಿಯಬೇಡಿ. ಕಾಂಗ್ರೆಸ್ ನಾಯಕರನ್ನು ಗುರಿ ಮಾಡಿದರೆ, ಸುಮ್ಮನೆ ಕೂರಲ್ಲ. ಕೆಜಿ ಹಳ್ಳಿ, ಡಿಜೆ ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದರು.
ಈ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಫಿಕ್ಸ್ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ರೀತಿಯ ಪ್ರಯತ್ನ ಮುಂದುವರಿದರೆ ಬಿಜೆಪಿ ವಿರುದ್ಧ ಅಲ್ಲ, ಪೊಲೀಸರ ವಿರುದ್ಧ ನಾವು ಹೋರಾಟ ಆರಂಭ ಮಾಡುತ್ತೇವೆ. ಮಿಸ್ಟರ್ ಕಮಿಷನರ್, ಬಿ ಕೇರ್ ಫುಲ್ ಎಂದು ಎಚ್ಚರಿಸಿದರು.
ಗಲಭೆಯನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದೀರಿ. ಈಗ ಏಜೆಂಟ್ ಥರ ವರ್ತಿಸುತ್ತಿದ್ದೀರಿ. ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಅಮಾಯಕರನ್ನು ಬಂಧಿಸಿದರೆ ನಾವು ಸುಮ್ಮನಿರಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಇನ್ನೂ ಸತ್ತಿಲ್ಲ ಎಂದರು.
ನಿಮ್ಮ ತನಿಖಾ ಸಂಸ್ಥೆಯ ಮೇಲೆ ನಮಗೆ ನಂಬಿಕೆ ಇಲ್ಲ. ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.



