ಡಿವಿಜಿ ಸುದ್ದಿ, ಬೆಂಗಳೂರು: ಹೊಸಕೋಟೆ ನಗರ ಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ್ದು, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. ಇನ್ನು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮ್ಯಾಜಿಕ್ ವರ್ಕ್ ಆಗಿಲ್ಲ. ಒಟ್ಟು 31 ವಾರ್ಡ್ ನಲ್ಲಿ ಬಿಜೆಪಿ 22 ಸ್ಥಾನ, ಶರತ್ ಬಚ್ಚೇಗೌಡ ಬೆಂಬಲಿಗರು 7, ಪಕ್ಷೇತರರು 2 ಸ್ಥಾನ ಗೆಲುವು ಸಾಧಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾಗಿದ್ದ ಹೊಸಕೋಟೆಯಲ್ಲಿ, ನಗರಸಭೆ ಚುನಾವಣೆಯೂ ಎಲ್ಲರ ಗಮನ ಸೆಳೆದಿತ್ತು. ಉಪ ಚುನಾವಣೆಯಲ್ಲಿ ಸ್ವಾಭಿಮಾನವನ್ನು ಪಣಕ್ಕೆ ಇಟ್ಟಿದ್ದ ಶರತ್ ಬಚ್ಚೇಗೌಡ ನಗರ ಸಭೆ ಚುನಾವಣೆಯಲ್ಲಿ ಈ ತಂತ್ರ ಫಲ ನೀಡಿಲ್ಲ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸೋತಿದ್ದ ಎಂಟಿಬಿ ನಾಗರಾಜ್ ಕಮಾಲ್ ಮಾಡಿದ್ದು, ಎಂಟಿಬಿ ಬೆಂಬಲಿಗರು 22 ವಾರ್ಡ್ ನಲ್ಲಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಎಂಟಿಬಿ ನಾಗರಾಜು, ಶರತ್ ಬಚ್ಚೇಗೌಡ ವಿರುದ್ಧ ಉಪಚುನಾವಣೆ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.
ಶಾಸಕ ಶರತ್ ಪ್ರಭಾವ ನಗರಸಭೆ ಚುನಾವಣೆಯಲ್ಲಿ ಅಷ್ಟೇನು ಕೆಲಸ ಮಾಡಿಲ್ಲ. ಇಬ್ಬರ ಬಿಗ್ ಫೈಟ್ ನಲ್ಲಿ ಕಾಂಗ್ರೆಸ್ ಪಕ್ಷ ಶೂನ್ಯ ಸಾಧನೆ ಮಾಡಿದೆ. ಒಟ್ಟು ನಗರಸಭೆಯ 31 ವಾರ್ಡ್ ಗಳಲ್ಲಿ ಬಿಜೆಪಿ 22 ವಾರ್ಡುಗಳಲ್ಲಿ ಗೆಲುವು ಸಾಧಿಸುವ ಮೂಲಕ ಹೊಸಕೋಟೆಯಲ್ಲಿ ಕಲಮ ಅರಳಿಸಿದೆ.ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು, ಒಂದು ಸ್ಥಾನ ಕೂಡ ತೆರೆಯಲು ಸಾಧ್ಯವಾಗಿಲ್ಲ.



