ಡಿವಿಜಿ ಸುದ್ದಿ, ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ಬೆನ್ನೆಲೇ ಡಿ.9 ಫಲಿತಾಂಶದ ಲೆಕ್ಕಾಚಾರಕ್ಕಾಗಿ ಮೂರು ಪಕ್ಷದ ನಾಯಕರು ತಮ್ಮದೇ ತಂತ್ರ ರೂಪಿಸುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಜೆಡಿಎಸ್ ಜೊತೆ ಮರು ಮೈತ್ರಿ ಮಾಡಿಕೊಳ್ಳು ಉತ್ಸಾಹ ತೋರಿದೆ. ಇದರ ನಡುವೇ ಪ್ರಭಾವಿ ಕಾಂಗ್ರೆಸ್-ಜೆಡಿಎಸ್ ನಾಯಕರು ಹುಬ್ಬಳ್ಳಿಯಲ್ಲಿ ಭೇಟಿಯಾಗಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.
ಈಗಾಗಲೇ ಎರಡು ದಿನದಿಂದ ಕಾಂಗ್ರೆಸ್-ಜೆಡಿಎಸ್ ಮರು ಮೈತ್ರಿ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಭೇಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸುವಂತೆ ಮಾಡಿದೆ

ಈ ಇಬ್ಬರು ಪ್ರಭಾವಿ ನಾಯಕರು ಇವತ್ತು ಹುಬ್ಬಳಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದ್ರು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೆಳಗಾವಿಯಿಂದ ಚಿಕ್ಕಬಳ್ಳಾಪುರಕ್ಕೆ ಹೊರಟಿದ್ದರು. ಹವಾಮಾನ ವೈಪರೀತ್ಯದ ಕಾರಣ ಹೆಲಿಕಾಪ್ಟರ್ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಯಿತು. ಬೆಂಗಳೂರಿಗೆ ಹೊರಟಿದ್ದ ಡಿ. ಕೆ. ಶಿವಕುಮಾರ್, ಹುಬ್ಬಳ್ಳಿಯಿಂದ ಬೆಳಗಾವಿಗೆ ಉಪ ಚುನಾವಣೆ ಪ್ರಚಾರಕ್ಕೆ ಹೋಗಬೇಕಿತ್ತು. ಅನಿರೀಕ್ಷಿತವಾಗಿ ಈ ಇಬ್ಬರು ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ರು.
ಡಿಸೆಂಬರ್ 5ರಂದು 15 ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ. ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಗಳಿಸಲಿವೆ ಎಂಬ ಲೆಕ್ಕಾಚಾರ ಜೋರಾಗಿದ್ದು, ಈ ಇಬ್ಬರು ನಾಯಕರ ಭೇಟಿ ಮಹತ್ವ ಪಡೆದುಕೊಂಡಿದೆ.



