ಡಿವಿಜಿ ಸುದ್ದಿ, ಉಚ್ಚಂಗಿದುರ್ಗ: ದಾವಣಗೆರೆ ಜಿಲ್ಲೆ ಉದಯವಾದಗಿನಿಂದಲೂ ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲ್ಲೂಕು, ಇತ್ತೀಚೆಗಷ್ಟೇ ಬಳ್ಳಾರಿ ಜಿಲ್ಲೆಗೆ ಸೇರಿತ್ತು. ಇದೀಗ ಅನುದಾನ, ಅಭಿವೃದ್ಧಿ ವಿಚಾರ ಸೇರಿದಂತೆ ಗಡಿ ಭಾಗದ ಅರಸೀಕೆರೆ ಬ್ಲಾಕ್ ಅನ್ನು ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡುತ್ತಿದೆ. ಹೀಗಾಗಿ ಜಗಳೂರು ವಿಧಾನಸಭಾ ಕ್ಷೇತ್ರ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಅರಸೀಕೆರೆ ಬ್ಲಾಕ್ ಪುನಃ ದಾವಣಗೆರೆ ಜಿಲ್ಲೆಗೆ ಸೇರಿಸಲು ಪರ-ವಿರೋಧ ಚರ್ಚೆ ನಡೆಯುತ್ತಿದೆ.
ಉಚ್ಚಂಗಿದುರ್ಗದ ಹಾಲಮ್ಮ ತೋಪಿನಲ್ಲಿ ದಾವಣಗೆರೆ ಜಿಲ್ಲೆಗೆ ಮರು ಸೇರ್ಪಡೆ ಕುರಿತು ಸಭೆ ನಡೆಯಿತು.ತಾಲ್ಲೂಕು ಪಂಚಾಯಿತಿ ಸದಸ್ಯ ಪಾಟೀಲ್ ಕೆಂಚನಗೌಡ ಮಾತನಾಡಿ, ಕಲ್ಯಾಣ ಕರ್ನಾಟಕದ 371 ಜೆ ಕಲಂ ಅಡಿಯಲ್ಲಿ ಹರಪನಹಳ್ಳಿ ತಾಲ್ಲೂಕು ಅಭಿವೃದ್ಧಿ ಹೊಂದಲಿ ಎಂಬ ಉದ್ದೇಶದಿಂದ ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲ್ಲೂಕನ್ನು ಬಳ್ಳಾರಿಗೆ ಸೇರ್ಪಡೆ ಮಾಡಲಾಯಿತು.
ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅರಸೀಕೆರೆ ಬ್ಲಾಕ್ ಆತಂತ್ರದಲ್ಲಿದೆ. ಬ್ಲಾಕ್‌ನ 7 ಪಂಚಾಯಿತಿಯ ಮುಖಂಡರು ಚರ್ಚಿಸಿ ಬಳ್ಳಾರಿ ಜಿಲ್ಲೆಯಿಂದ ದಾವಣಗೆರೆ ಜಿಲ್ಲೆಗೆ ಮರು ಸೇರ್ಪಡೆಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಒಂದು ತಾಲ್ಲೂಕಿನಲ್ಲಿ ಇಬ್ಬರು ಶಾಸಕರು ಇರುವುದರಿಂದ ಅನುದಾನ ಹಂಚಿಕೆಯಲ್ಲಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಅರಸೀಕೆರೆ ಹೋಬಳಿ ಅಭಿವೃದ್ಧಿ ವಂಚಿತವಾಗಿದೆ.ಹೀಗಾಗಿ ಶಾಸಕ ರಾಮಚಂದ್ರ ಅರಸೀಕೆರೆ ಬ್ಲಾಕ್ ಅನ್ನು ಜಗಳೂರು ತಾಲ್ಲೂಕಿಗೆ ಸೇರ್ಪಡೆ ನಿರ್ಧಾರ ಕೈಗೊಂಡಿದ್ದರು.
ಸ್ಥಳೀಯರ ಒತ್ತಡಕ್ಕೆ ಮಣಿದು ಹಿಂದೆ ಸರಿಯುತ್ತಿದ್ದಾರೆ. ಆದರೆ, ಕೆಲವರು ಕಲ್ಲು ಗಣಿಗಾರಿಕೆ ಮಾಲೀಕರ ಒತ್ತಡದಿಂದ ಜಿಲ್ಲೆಯ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಅರಸೀಕೆರೆ ಬ್ಲಾಕ್ ಅನ್ನು ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾಗಬೇಕು. ಅಥವಾ ಹಂಚಿಕೆ ಆಗಿರುವ ಅರಸೀಕೆರೆಯನ್ನು ತಾಲ್ಲೂಕು ಎಂದು ಘೋಷಿಸಿ ಹರಪನಹಳ್ಳಿ ಜಿಲ್ಲೆಯನ್ನು ಘೋಷಿಸಲು ಹೋರಾಟ ಮಾಡಬೇಕು ಎಂದರು.
ಮುಖಂಡ ಅಣಜಿಗೆರೆ ಮಂಜುನಾಥ್, ಅರಸೀಕೆರೆ ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ ದಾಣಗೆರೆ ಜಿಲ್ಲೆಗೆ ಸೇರಿದೆ. ಆದರೆ 371 ಜೆ ನೆಪದಲ್ಲಿ ಕೆಲ ರಾಜಕೀಯ ಹಿತಾಸಕ್ತಿಗಳು ಬಳ್ಳಾರಿ ಸೇರ್ಪಡೆ ಮಾಡಿವೆ ಎಂದರು.
ರೈತ ಸಂಘದ ಕರಡಿದುರ್ಗ ಚೌಡಪ್ಪ, ಬಳ್ಳಾರಿ ಜಿಲ್ಲೆಗೆ ಸೇರಿದ್ದಾಗಿನಿಂದ ಅರಸೀಕೆರೆ ಬ್ಲಾಕ್ ಅಭಿವೃದ್ಧಿಯಲ್ಲಿ ವಂಚಿತವಾಗಿದೆ. ಅಲ್ಲಿನ ಅಧಿಕಾರಿಗಳಿಂದ ರೈತರ ಪೌತಿ ಖಾತೆ ಬದಲಾವಣೆ ಆಗುತ್ತಿಲ್ಲ ಎಂದು ದೂರಿದರು.
ಮುಖಂಡ ಎಸ್. ಹನುಮಂತಪ್ಪ ಮಾತನಾಡಿ, ಕೆಲವರು ಅರಸೀಕೆರೆ ಬ್ಲಾಕ್ ಅನ್ನು ಬಳ್ಳಾರಿ ಜಿಲ್ಲೆಯಿಂದ ದಾವಣಗೆರೆ ಮರು ಸೇರ್ಪಡೆ ಮಾಡುವ ಸಭೆಗಳು ನಡೆಯುತ್ತಿವೆ. ಇದು ಖಂಡನೀಯ. 371 ಜೆ ಅಡಿಯಲ್ಲಿ ತಾಲ್ಲೂಕಿನ ಎಸ್ಸಿ, ಎಸ್ಟಿ ವರ್ಗದವರಿಗೆ ಮೀಸಲಾತಿ ಸಿಕ್ಕಿದೆ. ದಾವಣಗೆರೆಗೆ ಜಿಲ್ಲೆಗೆ ಸೇರಿಸುವುದಕ್ಕಿಂತ ಅರಸಿಕೆರೆಯನ್ನು ತಾಲ್ಲೂಕು ಕೇಂದ್ರವಾಗಿ, ಹರಪನಹಳ್ಳಿ ಅಥವಾ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ ಅಭಿವೃದ್ಧಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ದ್ಯಾಮನಗೌಡ, ಉಮೇಶ್, ಫಣಿಯಾಪುರ ಲಿಂಗರಾಜ, ಕೆಂಚಪ್ಪ, ಅನಂದಪ್ಪ, ಹನುಮಂತಪ್ಪ, ಸಿದ್ದೇಶ, ಯಶವಂತ, ಪರಶುರಾಮ, ಮಂಜುನಾಥ್, ಕೃಷ್ಣ, ಯುವರಾಜ ಉಪಸ್ಥಿತರಿದ್ದರು.



