ಡಿವಿಜಿ ಸುದ್ದಿ, ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಕಾರಣ ನೀಡದೇ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕೆಲವರು ಬಾಯಿ ಚಪಲಕ್ಕೆ ಮೂರ್ಖತನದ ಹೇಳಿಕೆ ನೀಡುತ್ತಿರುತ್ತಾರೆ. ಇತ್ತೀಚೆಗೆ ನಡೆದ ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರು ಭಾಗಿಯಾಗಿದ್ದರು. ಈ ವೇಳೆ ಮುಖ್ಯಮಂತ್ರಿಗಳು ಎಲ್ಲರಿಗೂ ನಿಮ್ಮ ಕ್ಷೇತ್ರದ ಸಮಸ್ಯೆ ಏನು ಅಂತ ಕೇಳಿ, ಬಗೆಹರಿಸಿಕೊಳ್ಳುವಂತೆ ಹೇಳಿದ್ದರು. ಸಭೆಯಲ್ಲಿ ಸುಮ್ಮನೆ ಬಾಯಿ ಮಚ್ಚಿ ಕುಳಿತುಕೊಂಡು, ಈಗ ಉತ್ತರ ಪೌರುಷದಂತೆ ಹೊರಗೆ ಬಂದು ಯತ್ನಾಳ್ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಯತ್ನಾಳ್ ಹೇಳಿಕೆಯಿಂದ ಪಕ್ಷದ ಮೇಲೆ ಯಾವ ಪರಿಣಾಮ ಬೀರಲ್ಲ. ಪದೇ ಪದೇ ಈ ರೀತಿಯ ಯತ್ನಾಳ್ ಹೇಳಿಕೆಗಳಿಗೆ ಬೆಲೆ ನೀಡಲ್ಲ. ಈ ಕೂಡಲೇ ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಚಾಟಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.