ಡಿವಿಜಿ ಸುದ್ದಿ, ಬೆಂಗಳೂರು: ನಾನು ಶಿವಕುಮಾರ್ ಅವರ ಮನೆಗೆ ಹೋಗಿ ಮತ್ತೆ ಕಾಂಗ್ರೆಸ್ ಗೆ ಸೇರುತ್ತೇನೆ ಎಂದು ಕಾಲು ಹಿಡಿದಿದ್ದು ನಿಜವಾಗಿದ್ದಲ್ಲಿ ಜನತೆಯ ಮುಂದೆ ಸಾಕ್ಷ್ಯ ಬಿಡುಗಡೆ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸವಾಲು ಹಾಕಿದ್ದಾರೆ.
ಡಿ.ಕೆ ಶಿವಕುಮಾರ್ ಮನೆ ಒಳಗೆ ಮತ್ತು ರಸ್ತೆಯಲ್ಲಿ ಸಾಕಷ್ಟು ಸಿ.ಸಿ ಟಿವಿ ಕ್ಯಾಮರಾ ಹಾಕಿಸಿದ್ದಾರೆ. ನಾನು ಬಂದಿದ್ದೇ ಆಗಿದ್ದರೆ, ಸಾಕ್ಷ್ಯ ವನ್ನು ರಾಜ್ಯದ ಜನತೆಗೆ ಮುಂದೆ ಬಿಡುಗಡೆ ಮಾಡಲಿ. ಅವರೇ ಈ ಹಿಂದೆ ಹಲವು ಬಾರಿ ವಿವಿಧ ಅನುಕೂಲಗಳಿಗಾಗಿ ನನ್ನ ಕಾಲಿಗೆ ಬಿದ್ದಿರುವ ವಿಡಿಯೋ ನನ್ನ ಬಳಿ ಇವೆ. ಬೇಕೆಂದರೆ ಅದನ್ನು ರಾಜ್ಯದ ಜನತೆ ಮುಂದೆ ಪ್ರದರ್ಶಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೆ ಸಚಿವ ಸ್ಥಾನ ಸಿಗಲಿದ್ದು, ಅದನ್ನು ತಪ್ಪಿಸುವ ಉದ್ದೇಶದಿಂದ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಬಿಜೆಪಿ ಹಾಗೂ ನನ್ನ ಮಧ್ಯೆ ವಿಷದ ಬೀಜ ಬಿತ್ತುವ ಪ್ರಯತ್ನ ನಡೆಸಿದ್ದಾರೆ ಕಿಡಿ ಕಾರಿದ್ದಾರೆ.
ಬೇರೆಯವರು ಬೆಳೆಯುವುದನ್ನು ಸಹಿಸದ ಮತ್ತು ಹೊಟ್ಟೆ ಕಿಚ್ಚು ಪ್ರದರ್ಶಿಸುತ್ತಿದ್ದಾರೆ. ಇದೇ ರೀತಿ ಆರೋಪಗಳನ್ನು ಮುಂದುವರಿಸಿಕೊಂಡು ಬಂದರೆ, ಸುದ್ದಿಗೋಷ್ಠಿ ಕರೆದು ಅವರ ರಾಜಕೀಯ ಜೀವನದ ವಾಸ್ತವ ಸಂಗತಿ ಜನರ ಮುಂದೆ ಬಿಚ್ಚಿಡಬೇಕಾಗುತ್ತದೆ. ನನ್ನನ್ನು ವಿಧಾನಪರಿಷತ್‌ಗೆ ನೇಮಕ ಮತ್ತು ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ ರಾಜ್ಯ ಮತ್ತು ಕೇಂದ್ರದ ವರಿಷ್ಠರು ಭರವಸೆ ನೀಡಿದ್ದರು. ಮೂರು ತಿಂಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೆ ಕರೆಸಿ, ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡುವ ವಿಶ್ವಾಸ ನೀಡಿದ್ದರು ಎಂದರು.



