ಡಿವಿಜಿ ಸುದ್ದಿ ಬೆಂಗಳೂರು: ಜೈಲು ವಾಸದಿಂದ ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗಿದೆಯಾ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಡಿ.ಕೆ.ಶಿವಕುಮಾರ್, ಈಗ ನಾನು ಏನು ಕಡಿಮೆ ಆಗಿದ್ದೀನಿ? ಮುಂದೇನಾಗುತ್ತೆ ನೋಡಿ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ. ಸ್ವಲ್ಪ ಸಮಯ ಕಾದು ನೋಡಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ದೆಹಲಿಯ ತಿಹಾರ್ ಜೈಲುವಾಸ ಅನುಭವಿಸಿ ಜಾಮೀನು ಮೇಲೆ ಹೊರ ಬಂದ ಡಿ.ಕೆ ಶಿವಕುಮಾರ್ ತಮ್ಮ ನಿವಾಸದಲ್ಲಿ ಮಾಧ್ಯಮ ಜೊತೆ ಮಾತನಾಡಿ, ನಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈಗ ನಾನು ಏನು ಕಡಿಮೆ ಆಗಿದ್ದೀನಿ? ಮುಂದೇನಾಗುತ್ತೆ ನೋಡಿ’ ಎಂದು ಪ್ರಶ್ನೆ ಕೇಳಿದ ಪತ್ರಕರ್ತರಿಗೆ ನೇರ ಉತ್ತರ ನೀಡಿದರು.
ನನ್ನ ತಾಯಿಗೂ ಸಮನ್ಸ್ ಬಂದಿದೆ. ಅವರ ವಿಚಾರಣೆ ಸಂದರ್ಭ ನಾನೂ ನ್ಯಾಯಾಲಯಕ್ಕೆ ಹೋಗಬೇಕು. ಗೌರಿ ಹಬ್ಬದ ದಿನವೇ ಹಿರಿಯರಿಗೆ ಎಡೆ ಇಡುವುದು ನನ್ನ ಕುಟುಂಬದ ಸಂಪ್ರದಾಯ. ಈ ಬಾರಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾಳೆ ನನ್ನೂರು ದೊಡ್ಡಆಲದಹಳ್ಳಿಯಲ್ಲಿ ತಂದೆಗೆ ಎಡೆ ಇಡುವ, ಗೌರವಿಸುವ ಪೂಜೆ ಮಾಡಬೇಕಿದೆ. ನನ್ನ ಅಧ್ಯಾತ್ಮ ಶಕ್ತಿಕೇಂದ್ರ ನೊಣವಿನಕೆರೆ ಅಜ್ಜಯ್ಯನವರ ದರ್ಶನಕ್ಕೆ ಹೋಗಬೇಕಿದೆ ಎಂದರು.
ನನ್ನ ಆರೋಗ್ಯ ಸ್ಥಿತಿ ಇನ್ನೂ ಸರಿಯಾಗಿಲ್ಲ. ಬಿಪಿ ನಿಯಂತ್ರಣಕ್ಕೆ ಬಂದಿಲ್ಲ. ಹೆಚ್ಚು ಹೊತ್ತು ಕೂರೋಕೂ ಆಗ್ರಿಲ್ಲ. ಚೆಕಪ್ ಮಾಡಿಸಬೇಕಿದೆ. ಪ್ರೀತಿಯಿಂದ ಬಂದವರನ್ನು ಭೇಟಿಯಾಗದೆ ಕಳಿಸಿದರೆ ಸರಿಯಿರುವುದಿಲ್ಲ ಎನ್ನುವ ಕಾರಣಕ್ಕೆ ಎಲ್ಲರನ್ನೂ ಭೇಟಿಯಾದೆ. ಬೆಳಗ್ಗೆಯಿಂದ ಸಾಕಷ್ಟು ಜನ ಫೋನ್ ಮಾಡಿದ್ದಾರೆ. ಶಾಸಕರು ಮನೆಗೆ ಭೇಟಿ ನೀಡಿದ್ದಾರೆ ಎಂದರು.



