ಡಿವಿಜಿ ಸುದ್ದಿ, ಶಿರಾ: ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇಲ್ಲ. ಮುಖ್ಯಮಂತ್ರಿಗೆ ಪುತ್ರ ವ್ಯಾಮೋಹ ಹೆಚ್ಚಾಗಿ ಆಡಳಿತ ಕುಸಿದಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಉಪ ಚುನಾವಣಾ ಫಲಿತಾಂಶ ರಾಜಕೀಯ ದಿಕ್ಸೂಚಿಯಲ್ಲ. ಈ ಫಲಿತಾಂಶ ರಾಜ್ಯದ ಭ್ರಷ್ಟ ಸರ್ಕಾರಕ್ಕೆ ಒಂದು ಸಂದೇಶ ನೀಡಲಿದೆ.ಉತ್ತರ ಕರ್ನಾಟಕ ಜಲ ಪ್ರವಾಹಕ್ಕೆ ಯಾವೊಬ್ಬ ಸಚಿವರು ಜನರ ನೆರವಿಗೆ ಬರುತ್ತಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಮುಖಂಡರು ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ. ಬಿಜೆಪಿ ವಿಜಯೇಂದ್ರ ನೇತೃತ್ವದಲ್ಲಿ ಉಪ ಚುನಾವಣೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ ಮೇಲೆ ಬೇರೆಯವರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ.ಶಿರಾ ಮತದಾರರು ಬುದ್ಧಿವಂತರಿದ್ದಾರೆ. ಜೆಡಿಎಸ್ ಶಾಸಕರಿದ್ದಾಗ ಏನಾಗಿದೆ, ಬಿಜೆಪಿ ಸರ್ಕಾರದಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಮತದಾರರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ವರದಿಯಲ್ಲಿ ಶೇ 44 ರಷ್ಟು ಮತ ಪಡೆದು ಟಿ.ಬಿ.ಜಯಚಂದ್ರ ಅವರು ಬಹುಮತ ಪಡೆಯಲಿದ್ದಾರೆ ಎಂದರು.



