ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನೈತಿಕತೆ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಭಾರತೀಯ ಜನತಾ ಪಕ್ಷ ಇದನ್ನು ಖಂಡಿಸುತ್ತದೆ. ಪ್ರಜಾಪ್ರಭುತ್ವದ ಮೇಲೆ ಬಿಜೆಪಿಗೆ ಅಪಾರವಾದ ಗೌರವವಿದ್ದು, ಹೀಗಾಗಿಯೇ ಚುನಾವಣೆ ಪ್ರಕ್ರಿಯೆಯಲ್ಲಿ ನಾವು ಭಾಗಿಯಾಗುತ್ತಿದ್ದೇವೆ. ಫೆ . 19 ರಂದು ನಡೆಯುವ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಶಾಸಕರು, ಸಂಸದರು ಮತದಾನ ಮಾಡಲು ಕಾನೂನಿನಲ್ಲಿ ಅವಕಾಶವಿರುವುದರಿಂದ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಶಾಸಕರು ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಹೇಗೆ ಮತದಾನ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಇಂಥವರಿಂದ ಬಿಜೆಪಿ ನೈತಿಕತೆ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಲದಿದಲ್ಲೂ ಪ್ರಜಾಪ್ರಭುತ್ವನ್ನು ವಿರೋಧಿಸುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷವನ್ನು ಈಗಾಗಲೇ ಜನರು ತಿರಸ್ಕರಿಸಿದ್ದಾರೆ. ಅಧಿಕಾರ ಕಳೆದುಕೊಂಡ ಹತಾಶೆ ಮನೋಭಾವದಲಲ್ಲಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.
ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲು ಕಾಂಗ್ರೆಸ್ ಪಕ್ಷವೂ ಎಂಎಲ್ ಸಿಗಳನ್ನು ಸೇರಿಸಿದೆ. ಅವರು ಮಾಡಿದ್ದು ಸರಿ. ನಾವು ಮಾಡಿದ್ದು ತಪ್ಪಾ..? ಮತದಾನ ಪಟ್ಟಿಯಲ್ಲಿ ನಾವು ಎಂಎಲ್ ಸಿ ಗಳನ್ನು ಸೇರಿಸಿರುವುದು ಸತ್ಯ. ಅದರ ವಿರುದ್ಧ ಹೋರಾಟ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಅದನ್ನು ಬಿಟ್ಟು ವಾಮಮಾರ್ಗದಿಂದ ಅಧಿಕಾರ ಹಿಡಿಯುತ್ತಿದೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ನಿಕಟಪೂರ್ವ ಅಧ್ಯಕ್ಷ ಯಶವಂತ್ ರಾವ್ ಜಾಧವ್ ಹೇಳಿದರು.
ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರಾದ ಅಜಯಕುಮಾರ್, ರಾಕೇಶ್ ಜಾಧವ್, ಸಂಗನಗೌಡ್ರು , ಆನಂದ್ ರಾವ್ ಶಿಂಧೆ, ಪಿ.ಸಿ. ಶ್ರೀನಿವಾಸ್, ಜಗದೀಶ್ , ಪ್ರವೀಣ್ ಜಾಧವ್, ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.