ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರನ್ನು ಅಕ್ರಮವಾಗಿ ಸೇರಿಸಿದ ಆರೋಪದ ಹಿನ್ನೆಲೆ ಪಾಲಿಕೆಯ ಇಬ್ಬರು ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಫೆ. 19 ರಂದು ನಡೆದ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ 8 ವಿಧಾನ ಪರಿಷತ್ ಸದಸ್ಯರನ್ನು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರಿಸಿದೆ ಎಂದು ಕಾಂಗ್ರೆಸ್ ಪಕ್ಷ ದೂರು ಸಲ್ಲಿಸಿತ್ತು. ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿತ್ತು. ಆದರೆ, ಇದೀಗ ಮೇಯರ್ ಚುನಾವಣೆಯಲ್ಲಿ ಮತದಾರರ ಪಟ್ಟಿ ತಯಾರಿಸುವಾಗ ಸೂಕ್ತವಾಗಿ ಪರಿಶೀಲನೆ ನಡೆಸದೇ, ಪಟ್ಟಿ ತಯಾರಿಸಿದ್ದಾರೆ ಎಂದು ಜಿಲ್ಲಾಧಿಕಾರಿಪಾಲಿಕೆಯ ಇಬ್ಬರು ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆಯ ಮತದಾರ ನೋಂದಾಣಾಧಿಕಾರಿ ನಾಗರಾಜ ಕೆ, ಸಹಾಯಕ ನೋಂದಣಾಧಿಕಾರಿ ಜಯಣ್ಣ ಕೆ ಅವರನ್ನು ಪ್ರಜಾಪ್ರಾತಿನಿಧ್ಯ ಕಾಯ್ದೆ ಅಡಿ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ಈ ನಿರ್ಧಾರದಿಂದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಕ್ರಮ ಮತದಾರನ್ನು ಸೃಷ್ಠಿಸಿರುವುದು ಸತ್ಯ ಎಂದು ಸಾಬೀತು ಆಗಿದೆ. ಈ ಮೂಲಕ ದೊಡ್ಡ ಅಧಿಕಾರಿಗಳ ತಪ್ಪಿಗೆ ಸಣ್ಣ ಅಧಿಕಾರಿಗಳನ್ನು ತಲೆದಂಡ ಮಾಡಲಾಗಿದೆ. ಜಿಲ್ಲಾಡಳಿತ ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರ ನೀಡಿದೆ. ದಾವಣಗೆರೆಯಲ್ಲಿ ವಾಸವಿಲ್ಲದ 8 ವಿಧಾನ ಪರಿಷತ್ ಸದಸ್ಯರನ್ನು ಅಕ್ರಮವಾಗಿ ಸೇರಿಸಿ ಮೇಯರ್ ಚುನಾವಣೆ ಗೆಲುವು ಸಾಧಿಸಿದ್ದಾರೆ. ಹಿರಿಯ ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಕೊಳ್ಳಲು ಕಿರಿಯ ಅಧಿಕಾರಗನ್ನು ಅಮಾನತ್ತು ಮಾಡಿದ್ದಾರೆ ಎಂದು ಕಾಂಗ್ರೆಸ್ ನ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಆರೋಪಿಸಿದ್ದಾರೆ.
ಬಿಜೆಪಿ ಅಕ್ರಮವಾಗಿ ವಿಧಾನ ಪರಿಷತ್ತು ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದೆ ಎಂದು ಪಾಲಿಕೆ ಸದಸ್ಯರಾದ ಎ. ನಾಗರಾಜ್, ಕೆ. ಚಮನ್ ಸಾಬ್ , ಅಬ್ದುಲ್ ಲತೀಫ್, ಗಡಿಗುಡಾಳ್ ಮಂಜುನಾಥ್, ದೇವರ ಮನೆ ಶಿವಕುಮಾರ್, ಜಿ.ಡಿ ಪ್ರಕಾಶ್, ವಿ.ಎಚ್ .ವಿನಾಯಕ ಪೈಲ್ವಾನ್, ಕಬೀರ್ ಖಾನ್, ಕಲ್ಲಹಳ್ಳಿ ನಾಗರಾಜ್ ಸೇರಿದಂತೆ ಮತ್ತಿತರರು ಮತದಾರ ಪಟ್ಟಿ ಪರಿಶೀಲನಾಧಿಕಾರಿ ಹರ್ಷ ಗುಪ್ತ ಅವರಿಗೆ ದೂರು ಸಲ್ಲಿಸಿದ್ದರು.
ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿಕೆ
ಈ ವಿಚಾರವಾಗಿ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ನೇತೃತ್ವದಲ್ಲಿ ಮಹಾನಗರ ಪಾಲಿಕೆಯಲ್ಲಿ ನಡೆದ ವಿಚಾರಣೆಯಲ್ಲಿ ಬಿಜೆಪಿ ಪರ ವಕೀಲರು ಸಮಯಾವಕಾಶ ಕೇಳಿದ್ದರಿಂದ ಮಾರ್ಚ್ 17 ಕ್ಕೆ ವಿಚಾರಣೆ ಮುಂದೂಡಲಾಯಿತು. ಇನ್ನು ಮತದಾರ ಪಟ್ಟಿಯ ಗೊಂದಲ ಕುರಿತು ಕಾಂಗ್ರೆಸ್ ಪಕ್ಷ ಹೈಕೋರ್ಟ್ ನಲ್ಲಿ ಪ್ರಶ್ನಿಸಿದೆ. ಈ ಬಗ್ಗೆ ಮತದಾರ ಪಟ್ಟಿ ಪರಿಶೀಲನಾಧಿಕಾರಿ ಹರ್ಷ ಗುಪ್ತ ಅವರು ಏನು ವರದಿ ನೀಡುತ್ತಾರೆ ಎಂಬುದನ್ನು ನೋಡಿಕೊಂಡು ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೈ ಕೋರ್ಟ್ ಹೇಳಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.



