ಡಿವಿಜಿ ಸುದ್ದಿ, ದಾವಣಗೆರೆ: ದಿವಾಳಿ ಎದ್ದಿರುವುದು ಕಾಂಗ್ರೆಸ್ ಅಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದುರಾಡಳಿತ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ತಿರುಗೇಟು ನೀಡಿದ್ದಾರೆ.
ನಿನ್ನೆ ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ ಕಟೀಲ್, ದೇಶದಲ್ಲಿ ಸೋನಿಯಾಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ದಿವಾಳಿ ಎದ್ದಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಡಿ. ಬಸವರಾಜ್ , ದೇಶದ ಜನತೆ ಎರಡು ಬಾರಿ ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ನೀಡಿದ್ದರೂ ಸಹ ಉತ್ತಮ ಆಡಳಿತ ನೀಡುವಲ್ಲಿ ಪ್ರಧಾನಿ ಮೋದಿ ಮುಗ್ಗರಿಸಿದ್ದಾರೆ ಎಂದರು.
ಬಿಜೆಪಿ ಅಭಿವೃದ್ಧಿಯ ಮಂತ್ರ ಪಠಿಸದೇ ಕೇವಲ ರಾಮಮಂದಿರ-ಬಾಬ್ರಿಮಸೀದಿ ವಿಚಾರವನ್ನು ಮುಂದಿಟ್ಟುಕೊಂಡು ಕಳೆದ 3 ದಶಕಗಳ ಕಾಲ ದೇಶದಲ್ಲಿ ಗೊಂದಲ ವಿವಾದ ಸೃಷ್ಟಿಸಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿತ್ತು. ಇದೀಗ ಸುಪ್ರೀಂ ಕೋರ್ಟ್ ರಾಮಮಂದಿರ ವಿವಾದಕ್ಕೆ ಮುಕ್ತಿ ನೀಡಿ, ಪೌರತ್ವ ಕಾಯ್ದೆ ಮೂಲಕ ದೇಶದ ಜನರಲ್ಲಿ ಗೊಂದಲ ಉಂಟು ಮಾಡಿದ್ದಾರೆ.
ಸಂವಿಧಾನ ವಿರೋಧಿ ನೂತನ ಕಾಯ್ದೆಯಿದೆ ವಿರೋಧಿಸಿ ದೇಶಾದ್ಯಂತ ಪ್ರಜ್ಞಾವಂತ ಜನತೆ ಬೀದಿಗೆ ಇಳಿದಿದ್ದಾರೆ. ಇಂತಹ ಗೊಂದಲದ ಮಸೂದೆ ಜಾರಿಗೊಳಿಸಿದರೆ ರಾಮಮಂದಿರದಂತೆ ಮತ್ತೆ 30 ವರ್ಷಗಳ ಕಾಲ ಬಿಜೆಪಿ ರಾಜಕೀಯ ಬೆಳೆ ಬೆಯಿಸಬಹುದು ಎಂದು ಅಂದಾಜಿಸಿದೆ ಎಂದು ಅವರು ದೂರಿದ್ದಾರೆ.
ದೇಶದ ಆರ್ಥಿಕ ಕುಸಿತ, ದಾಖಲೆಯ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ, ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಮೋದಿ ಚಕಾರರು ಎತ್ತುತ್ತಿಲ್ಲ. ಮೋದಿಯವರು ಆಡಳಿತಕ್ಕೆ ಬಂದ ಮೇಲೆ ದೇಶದ ಗಡಿಭಾಗ ಹಾಗೂ ದೇಶದ ಒಳಗಿನ ಉದ್ದಗಲಕ್ಕೂ ಅಶಾಂತಿ ತುಂಬಿ ತುಳುಕುತ್ತಿದೆ ಎಂದರು.