ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ 24 ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಈ ಹಿನ್ನೆಲೆ ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಪಟ್ಟಿಯಿಂದ ನಾಲ್ಕು ಹೆಸರನ್ನು ಕೈ ಬಿಡಲಾಗಿದೆ.
ಅಧಿಕೃತ ಆದೇಶದ ವೇಳೆ ನಾಲ್ವರ ಹೆಸರನ್ನು ಕೈ ಬಿಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ. ಲಾಲಾಜಿ ಮೆಂಡನ್, ಜಿ.ಎಚ್.ತಿಪ್ಪಾರೆಡ್ಡಿ, ಬಸವರಾಜ್ ದಡೇಸುಗೂರ್ ಮತ್ತು ಪರಣ್ಣ ಮುನವಳ್ಳಿಯಿಂದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ವಾಪಸ್ ಪಡೆಯಲಾಗಿದೆ. ಲಾಲಾಜಿ ಆರ್ ಟಂಡನ್ (ಕಾಪು) ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ತಿಪ್ಪಾರೆಡ್ಡಿ (ಚಿತ್ರದುರ್ಗ) ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಬಸವರಾಜ ದಡೇಸೂರ್ (ಕನಕಗಿರಿ) ರಾಜ್ಯ ಸಮಾಜ ಕಲ್ಯಾಣ ಅಭಿವೃದ್ಧಿ ಮಂಡಳಿ, ಪರಣ್ಣ ಮುನವಳ್ಳಿ (ಗಂಗಾವತಿ) ಯವರನ್ನು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಸರ್ಕಾರದ ಅಧಿಕೃತ ಆದೇಶಕ್ಕೂ ಮುನ್ನವೇ ಕೆಲ ಹಿರಿಯ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ತಾಂತ್ರಿಕ ಕಾರಣದಿಂದ ನಾಲ್ವರಿಗೆ ನೀಡಿದ್ದ ನಿಗಮ ಮಂಡಳಿ ವಾಪಸ್ ಪಡೆಯಲಾಗಿದ್ದು, ಸಮಸ್ಯೆ ಸರಿಪಡಿಸಿ ನಿಗಮ ಮಂಡಳಿಗಳನ್ನು ಮರು ಹಂಚಿಕೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಬಿಜೆಪಿ ಒಂದು ವರ್ಷದ ಸಂಭ್ರಮದಲ್ಲಿ ಹೈಕಮಾಂಡ್ ನಾಯಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಶಾಕ್ ನೀಡಿದ್ದು, ಬಿಜೆಪಿ ಹೈಕಮಾಂಡ್, ರಾಜ್ಯ ಬಿಜೆಪಿ ಘಟಕಕ್ಕೆ ಗೊತ್ತಿಲ್ಲದೆ ನಿಗಮ ಮಂಡಳಿಗೆ ಶಾಸಕರನ್ನು ಯಡಿಯೂರಪ್ಪ ನೇಮಕ ಮಾಡಿದ್ದಾರೆ.



