ಡಿವಿಜಿ ಸುದ್ದಿ, ಬೆಂಗಳೂರ: ದೊರೆಸ್ವಾಮಿ ಅವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಖಂಡಿಸಿ ಸದನದಲ್ಲಿ ಪ್ರತಿಭಟಿಸಿದ್ದ ಕಾಂಗ್ರೆಸ್, ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದೆ. ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿ ಕೊಡದ ಸ್ಪೀಕರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿಯಾದ ಕಾಂಗ್ರೆಸ್ ನಿಯೋಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿರುದ್ಧ ರಾಜ್ಯಪಾಲ ವಿ.ಆರ್.ವಾಲಾಗೆ ದೂರು ನೀಡಿದರು. ಸದನದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಂವಿಧಾನದ 175ನೇ ಪರಿಚ್ಛೇದಡಿ ಸ್ಪೀಕರ್ ಗೆ ನಿರ್ದೇಶನ ನೀಡಲು ಘನತೆವೆತ್ತ ರಾಜ್ಯಪಾಲರಿಗೆ ಅಧಿಕಾರವಿದೆ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸ್ಪೀಕರ್ ಗೆ ನಿರ್ದೇಶನ ನೀಡಬೇಕು. ಶಾಸಕ ಯತ್ನಾಳ್ ಹೇಳಿಕೆ ವಿರುದ್ಧ ಚರ್ಚೆ ನಡೆಸಲು ಅವಕಾಶ ನೀಡಬೇಕು ಆಗ್ರಹಿಸಿದರು.
ಸ್ಪೀಕರ್ ಹಾಗೂ ಯತ್ನಾಳ್ ಇಬ್ಬರೂ ಸಂವಿಧಾನಕ್ಕೆ ವಿರೋದ್ಧವಾಗಿ ನೆಡೆದುಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಜ್ಯಪಾಲರು, ಸಂವಿಧಾನದ ನಿಯಮಗಳನ್ನು ನೋಡಿ ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ.



