ಡಿವಿಜಿ ಸುದ್ದಿ, ಕಾರವಾರ: ಮಧ್ಯಂತರ ಚುನಾವಣೆ ಎದುರಾಗುತ್ತೆ ಎಂಬುದು ಕಾಂಗ್ರೆಸ್ ಪಕ್ಷದ ತಿರುಕನ ಕನಸಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದರು.
ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಕದಂಬೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಮಧ್ಯಂತರ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಅವರು ವಾಸ್ತವಿಕ ಸಂಗತಿ ಅರಿತು ಮಾತನಾಡಬೇಕು. ಇಲ್ಲದೇ ಹೋದಲ್ಲಿ ಅವರಿಗೆ ಗೌರವ ಕಡಿಮೆ ಆಗುತ್ತದೆ ಎಂದರು.
3 ವರ್ಷಗಳ ಕಾಲ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕು ಎಂಬ ಕಾರಣದಿಂದ ಅವರು ಹೀಗೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಸೋಮವಾರವೇ ಖಾತೆ ಹಂಚಿಕೆ
ಈಗಾಗಲೇ ಸಚಿವರು ಪ್ರಮಾಣ ವಚನ ತೆಗೆದುಕೊಂಡಿದ್ದಾರೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳು ರಜೆ ಇರುವುದರಿಂದ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡುತ್ತೇವೆ. ಶೀಘ್ರದಲ್ಲಿ ಅಧಿವೇಶನ ಆರಂಭವಾಗಲಿದೆ. ಮಾರ್ಚ್ 5ರಂದು ಬಜೆಟ್ ಮಂಡನೆ ಆಗಲಿದ್ದು, ಇದು ಮಹತ್ವ ಪೂರ್ಣ ಬಜೆಟ್ ಆಗಲಿದೆ. ಸರೋಜಿನಿ ಮಹಿಷಿ ವರದಿ ಅನುಷ್ಟಾನಕ್ಕೆ ಕ್ರಮ ಕೈಗೊಂಡಿದ್ದೇವೆ. ನ್ಯೂನ್ಯತೆ ಮರು ಪರಿಶೀಲಿಸಿ ಮರು ಅನುಷ್ಠಾನಗೊಳಿಸುತ್ತೇವೆ ಎಂದು ತಿಳಿಸಿದರು.



