ಡಿವಿಜಿ ಸುದ್ದಿ, ಬೆಂಗಳೂರು: ಫೆ. 17 ರಿಂದ ಪ್ರಾರಂಭವಾಗಲಿರುವ ಅಧಿವೇಶನ ಮುಗಿಯುವ ವರೆಗೂ ಮೂಲ ಬಿಜೆಪಿಗರಿಗೆ ಸಚಿವ ಸ್ಥಾನ ನೀಡದಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗುತ್ತಿದ್ದು,13 ಸ್ಥಾನ ತುಂಬಿಕೊಳ್ಳುವ ಬದಲು 10 ಸ್ಥಾನ ಮಾತ್ರ ತುಂಬಿಕೊಳ್ಳುವಂತೆ ಆದೇಶ ಬಂದಿದೆ ಎಂದು ಹೇಳಲಾಗುತ್ತಿದೆ.
10 ಪ್ಲೆಸ್ 3 ಸೂತ್ರದ ಪ್ರಕಾರ 10 ಸ್ಥಾನ ಉಪ ಚುನಾವಣೆ ಗೆದ್ದವರಿಗೆ ಹಾಗೂ 3 ಸ್ಥಾನ ಮೂಲ ಬಿಜೆಪಿಗರಿಗೆ ನೀಡುವಂತೆ ಹೈ ಕಮಾಂಡ್ ಸೂಚನೆ ನೀಡಿತ್ತು. ಆದರೆ, ಮೂಲ ಬಿಜೆಪಿಗರಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗಿದ್ದು, ಇನ್ನೊಂದೆಡೆ ಕಳೆದ ವಿಧನಸಾಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸೋತಿರುವ ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವುದನ್ನು ಮೂಲ ಬಿಜೆಪಿಗರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅಧಿವೇಶನ ಸಂದರ್ಭದಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಧಿವೇಶನ ಆಗುವವರೆಗೂ ಮೂರು ಸ್ಥಾನ ತಡೆ ಹಿಡಿದು . ಅಧಿವೇಶನ ನಂತರ ಹಂಚಿಕೆ ಮಾಡುವಂತೆ ಸೂಚನೆ ಬಂದಿದೆ ಎಂದು ಹೇಳಿಲಾಗುತ್ತಿದೆ.
ಇನ್ನೊಂದೆಡೆ ನಾಳೆ ಸಚಿವ ಸಂಪುಟ ವಿಸ್ತರಣೆಗೆ ರಾಜಭವನದಲ್ಲಿ ಸಿದ್ಧತೆ ನಡೆಯುತ್ತಿದೆ. 13 ಜನ ನೂತನ ಸಚಿವರಾಗ್ತಾರೋ, ಇಲ್ಲವೇ ಕೇವಲ 10 ಮಾತ್ರ ನೂತನ ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕರಿಸುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.