ಡಿವಿಜಿ ಸುದ್ದಿ, ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಮತದಾರರು `ಜೈ’ ಎಂದಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಮತದಾರ `ಕೈ’ ಚೆಲ್ಲಿದ್ದು, ಜೆಡಿಎಸ್ ಪಕ್ಷಕ್ಕೆ ಒಂದೇ ಒಂದು ಕ್ಷೇತವನ್ನು ನೀಡದೆ ಮತದಾರರು ತಿರಸ್ಕರಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಸೇಫ್ ಎನ್ನುವ ಸಂದೇಶವನ್ನು ಮತದಾರರು ನೀಡಿದ್ದಾರೆ.
ಒಟ್ಟು 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಕಾಂಗ್ರೆಸ್ 2 ಕ್ಷೇತ್ರಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಸಂಸದ ಪುತ್ರ ಶರತ್ ಬಚ್ಚೇಗೌಡ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಜೆಡಿಎಸ್ ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧನೆ ಮಾಡದೇ ತೀವ್ರ ಹಿನ್ನಡೆ ಅನುಭವಿಸಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಅನರ್ಹರ ಶಾಸಕರು ಇದೀಗ ಅರ್ಹ ಶಾಸಕರಾಗಿದ್ದಾರೆ. 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ಹಿನ್ನಡೆ ಅನುಭವಿಸಿದ ಪರಿಣಾಮ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಉಳಿವಿನ ಬಗ್ಗೆ ಇದ್ದ ಆತಂಕ ದೂರವಾಗಿದೆ. ಇದರೊಂದಿಗೆ ಬಿಜೆಪಿಯ ಸಂಖ್ಯಾ ಬಲವು 105ರಿಂದ 117ಕ್ಕೇರುತ್ತಿದೆ. ಪ್ರಸ್ತುತ 222 ಸದಸ್ಯ ಬಲವಿರುವ ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 112 ಮ್ಯಾಜಿಕ್ ನಂಬರ್ ನಲ್ಲಿ ಬಿಜೆಪಿ ಬಹುಮತ ಪಡೆದಿದೆ.

ಚುನಾವಣೋತ್ತರ ಸಮೀಕ್ಷೆಯಲ್ಲಿ ಬಂದ ಫಲಿತಾಂಶಗಳು ಬಹುತೇಕವಾಗಿ ನಿಜವಾಗಿ ಪರಿಣಮಿಸಿದ್ದು ಬಿಜೆಪಿಗೆ 12 ಸ್ಥಾನಗಳು, ಕಾಂಗ್ರೆಸ್ 2, ಜೆಡಿಎಸ್ 0 ಹಾಗೂ ಪಕ್ಷೇತರರು 1 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿದ್ದಾರೆ.
ಈ ಚುನಾವಣಯಲ್ಲಿ ವ್ಯತಿರೀಕ್ತ ಫಲಿತಾಂಶ ಬಂದಲ್ಲಿ ಸರ್ಕಾರ ಉರುಳಿಸಿ, ಮತ್ತೆ ಮರು ಮೈತ್ರಿ ರಚಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಸಿದ್ಧತೆ ಮಾಡಿಕೊಂಡಿದ್ದವು. ಚುನಾವಣೆ ನಂತರ ವಿಪಕ್ಷಗಳಿಗೆ ತೀರಾ ಹಿನ್ನಡೆಯಾಗಿದೆ.
ಈ ಹಿಂದೆ ಮೈತ್ರಿ ಸರ್ಕಾರ ುರುಳಿಸಲು ಕಾಂಗ್ರೆಸ್‌ನ 13, ಜೆಡಿಎಸ್‌ನ 3 ಹಾಗೂ ಒಬ್ಬ ಪಕ್ಷೇತರ ಶಾಸಕರು ರಾಜೀನಾಮೆ ಕೊಟ್ಟಿದ್ದರು. ಇದರಿಂದ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿತ್ತು. 105 ಸದಸ್ಯ ಬಲದ ಬಿಜೆಪಿ ಒಬ್ಬ ಪಕ್ಷೇತರ ಸದಸ್ಯರನ್ನು ಸೇರಿಸಿಕೊಂಡು ಸರ್ಕಾರ ರಚಿಸಿತ್ತು. ರಾಜೀನಾಮೆ ಕೊಟ್ಟ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಮಾತ್ರ ಉಪಚುನಾವಣೆ ನಡೆದಿದ್ದು, ಇನ್ನು 2 ಕ್ಷೇತ್ರಗಳಲ್ಲಿ ತಾಂತ್ರಿಕವಾಗಿ ಚುನಾವಣೆ ತಡೆ ಹಿಡಿಯಲಾಗಿತ್ತು.
.



