ಡಿವಿಜಿ ಸುದ್ದಿ , ಚಿಕ್ಕಬಳ್ಳಾಪುರ: ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಬಿದ್ದು ಹೋಗಲಿದ್ದು ಮಧ್ಯಂತರ ಚುನಾವಣೆ ಬರಲಿದೆ ಎಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ, ಮಾಜಿ ಸಿಎಂ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಪ್ರಚಾರದಲ್ಲಿ ನಾವು ಕೂಡ ಮಧ್ಯಂತರ ಚುನಾವಣೆಗೆ ಸಿದ್ಧ ಎಂದಿದ್ದಾರೆ .
ಈ ಹಿಂದೆ ಕುಮಾರಸ್ವಾಮಿ ನಾವು ಯಾವುದೇ ಸರ್ಕಾರ ಬೀಳಿಸಲ್ಲ, ಉಳಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಮೊನ್ನೆಯಷ್ಟೇ ಚುನಾವಣೆ ನಂತರ ಯಾರಿಗೆ ಬೆಂಬಲ ಕೊಡಬೇಕು ಎಂಬುದನ್ನು ನಿರ್ಧರಿಸುತ್ತೇನೆ ಎಂದಿದ್ದರು. ಇದೀಗ ಚುನಾವಣೆಗೆ ನಾವೂ ಕೂಡ ಸಿದ್ಧ ಎಂದಿದ್ದಾರೆ.
ತಾಲ್ಲೂಕಿನ ನಂದಿ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಅಭ್ಯರ್ಥಿ ಎನ್. ರಾಧಾಕೃಷ್ಣ ಪರ ಮತಯಾಚನೆ ನಡೆಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ಮೆಡಿಕಲ್ ಕಾಲೇಜು, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆಂದು ಹರಿಹಾಯ್ದರು.
ಮಧ್ಯಂತರ ಚುನಾವಣೆ ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನನ್ನಿಂದ ಏನಾದರೂ ಅನ್ಯಾಯವಾಗಿದೆಯೇ ಎಂಬ ಬಗ್ಗೆ ಕಾಂಗ್ರೆಸ್, ಬಿಜೆಪಿ ನಾಯಕರೊಂದಿಗೆ ಸಾರ್ವಜನಿಕವಾಗಿ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಸವಾಲು ಹಾಕಿದರು.
ಅಧಿಕಾರಕ್ಕಾಗಿ ಕಾಂಗ್ರೆಸ್‌ನವರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೇ ಒತ್ತಾಯ ಮಾಡಿ ನನ್ನನ್ನು ಮುಖ್ಯಮಂತ್ರಿಯಾಗಿ ಮಾಡಿದರು. ಆದರೆ, ಮೈತ್ರಿ ಸರ್ಕಾರ ರಚನೆಯಾದ ದಿನದಿಂದ ಅನರ್ಹ ಶಾಸಕರು ಸೇರಿದಂತೆ ಇತರ ನಾಯಕರು ಪ್ರತಿನಿತ್ಯ ಕಿರುಕುಳ ನೀಡಿದ್ರು ಎಂದು ಆರೋಪಿಸಿದರು.2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕಾಂಗ್ರೆಸ್, ಜೆಡಿಎಸ್‌ನ ಹಲವು ಶಾಸಕರಿಂದ ರಾಜೀನಾಮೆ ಕೊಡಿಸಿದ್ದರು.ಅದೇ ರೀತಿ ಈ ಬಾರಿಯೂ ಕುರಿ, ಮೇಕೆ, ಕೋಳಿಗಳನ್ನು ಖರೀದಿಸುವಂತೆ ಶಾಸಕರಿಗೆ ಕೋಟಿಗಟ್ಟಲೇ ಹಣ ಕೊಟ್ಟು ಖರೀದಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.



