ಡಿವಿಜಿಸುದ್ದಿ, ವಿಜಯಪುರ: ದೇಶದ್ರೋಹಿ ಘೋಷಣೆ, ಫೇಸ್‍ಬುಕ್ ಪೋಸ್ಟ್ ಹಾಕುವವರಿಗೆ ಇನ್ಮುಂದೆ ಜೈಲಿಗೆ ಕಳಿಸುವುದಿಲ್ಲ ನೇರವಾಗಿ ಗುಂಡೇಟೆ ಗತಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಯಾಕೋ ಪೂರ್ತಿ ಹಾದಿ ಬಿಡುತ್ತಿದ್ದಾರೆ. ಪ್ರಧಾನಿ ಹಾಗೂ ಗೃಹ ಮಂತ್ರಿಗಳು ಸಂವಿಧಾನವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಪಾರ್ಲಿಮೆಂಟ್‍ನಲ್ಲಿ ಪಾಸಾದ ಬಿಲ್ ಅನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಅವರ ಪಕ್ಷದ ಕಪಿಲ್ ಸಿಬಲ್ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ರಕ್ತಪಾತ ಏಕೆ ಮಾತನಾಡುತ್ತಾರೋ ಗೊತ್ತಿಲ್ಲ. ಅವರ ಉದ್ದೇಶ ದೇಶದಲ್ಲಿ ದಂಗೆ ಏಳಿಸುವುದು, ಅಶಾಂತಿ ಸೃಷ್ಠಿಸುವುದಿರಬೇಕು ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ದೇಶದಲ್ಲಿರುವ ಯಾವುದೇ ಜಾತಿಯವರಿಗೂ ತೊಂದರೆ ಇಲ್ಲ. ದೆಹಲಿಯಲ್ಲಿ ಉದ್ದೇಶ ಪೂರ್ವಕವಾಗಿ ಗಲಭೆ ಏಳಿಸುವುದು, ಭಾರತದ ಹೆಸರು ಕೆಡಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ವಿರೋಧ ಪಕ್ಷಗಳು ಹತಾಶರಾಗಿದ್ದು, ಅಧಿಕಾರಕ್ಕೆ ಬರೋದಿಲ್ಲ ಎಂಬುದು ಅವರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ಸಿನವರು ಹತಾಶರಾಗಿದ್ದಾರೆ, ಕಾಂಗ್ರೆಸ್ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಕಾಂಗ್ರೆಸ್ ಐಸಿಯುನಲ್ಲಿದೆ ಎಂದರು.
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇವೆ ಎನ್ನುತ್ತಾರೆ. ಯಾರೂ ಭಾರತದ ಧ್ವಜ ಹಿಡಿಯುತ್ತಿರಲಿಲ್ಲ ಅವರು ಈಗ ಹಿಡಿಯುತ್ತಿದ್ದಾರೆ. ಯಾರು ಭಾರತ ಮಾತಾಕಿ ಜೈ ಅನ್ನುತ್ತಿರಲಿಲ್ಲ ಅವರು ಈಗ ಭಾರತ ಮಾತಾಕಿ ಜೈ ಎನ್ನುತ್ತಿದ್ದಾರೆ. ಜನಗಣಮನ ಅನ್ನದವರು ಈಗ ರಾಷ್ಟ್ರಗೀತೆ ಹಾಡುತ್ತಿದ್ದಾರೆ.ಇಷ್ಟು ದಿನ ತುಕಡೆ ತುಕಡೆ ಅಂತಿದ್ದವರು, ಈಗ ನಾವು ದೇಶ ಬಿಡೋದಿಲ್ಲ ಅಂತಿದ್ದಾರೆ. ಹೀಗೆ ಭಾರತ ಪರಿವರ್ತನೆ ಆಗುತ್ತಿದೆ. ಈ ರೀತಿ ದೇಶ ಬದಲಿಸಿದ ಮೋದಿಗೆ ಹಾಗೂ ಅಮೀತ್ ಶಾಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಸಿದ್ದರಾಮಯ್ಯ ಇದ್ರಾ? ಇಲ್ಲಾ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇದ್ರಾ ಎಂದು ವ್ಯಂಗ್ಯವಾಡಿದರು. ಎಲ್ಲರೂ ಹೋರಾಟ ಮಾಡಿದ್ದಾರೆ. ವಾಜಪೇಯಿಯವರು ಮಾಡಿದ್ದಾರೆ ಆದರೆ ಸಿದ್ದಾಂತ ಬೇರೆ ಇದ್ದವು. ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ. ದೊರೆಸ್ವಾಮಿ ಪಾಕಿಸ್ತಾನ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.



