ಡಿವಿಜಿ ಸುದ್ದಿ, ದಾವಣಗೆರೆ: ದೇಶದ ರಕ್ಷಣೆಗೆ ಸದಾ ಸಿದ್ಧರಿರುವ ಸೈನಿಕರು ಮತ್ತು ಪೊಲೀಸರು ಕರ್ತವ್ಯದ ಜೊತೆಗೆ ಆರೋಗ್ಯ ಕಡೆಗೂ ಕಾಳಜಿ ವಹಿಸುವ ಅಗತ್ಯವಿದೆ ಎಂದು ಜಿಲ್ಲಾ ಪೂರ್ವವಲಯ ಮಹಾ ನಿರೀಕ್ಷಕ ಅಮ್ರಿತ್ ಪಾಲ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಕರ್ತವ್ಯ ನಿರ್ವಹಿಸುವ ಸೈನಿಕರು ಮತ್ತು ಪೊಲೀಸರ ಕರ್ತವ್ಯ ಶ್ಲಾಘನೀಯ. ದೇಶದ ರಕ್ಷಣೆ ಮಾಡುವಲ್ಲಿ ಸೈನಿಕರ ಪಾತ್ರ ಮಹತ್ವವಾಗಿದ್ದು, ದೇಶದ ಮತ್ತು ಜನರ ಹಿತರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ಸೈನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ನಮ್ಮ ದೇಶದ ರಕ್ಷಣೆ ಮತ್ತು ನಮ್ಮ ಶಾಂತಿಯುತ ಜೀವನಕ್ಕೆ ಸೈನಿಕರು ಮತ್ತು ಪೊಲೀಸರು ಮುಖ್ಯ ಕಾರಣ. ದೇಶದ್ಯಾಂತ ಇವತ್ತು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ದೇಶದಲ್ಲಿ ಅನೇಕ ಪೊಲೀಸರು ಮತ್ತು ಯೋಧರು ಹುತಾತ್ಮರಾಗುತ್ತಾರೆ. ಹುತಾತ್ಮ ಪೊಲೀಸ್ ಮತ್ತು ಯೋಧರ ಆತ್ಮಕ್ಕೆ ಶಾಂತಿ ಮತ್ತು ಗೌರವ ವಂದನೆ ಸಲ್ಲಿಸಲು ಇದು ಸೂಕ್ತ ಸಮಯ. ಹುತಾತ್ಮರಾದ ಸೈನಿಕ ಕುಟುಂಬಕ್ಕೆ ನಾವೆಲ್ಲಾ ಆತ್ಮಸ್ಥೈರ್ಯ ತುಂಬಬೇಕು. ಅವರು ಕುಟುಂಬದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾ ಎಂದು ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ೧೯೫೧ ರಲ್ಲಿ ನಡೆದ ಲಡಾಕ್ ಯುದ್ಧದಲ್ಲಿ ಚೀನಾದೊಂದಿಗೆ ಹೋರಾಡಿ ವಿಜಯ ಸಾಧಿಸಲಾಯಿತು. ಈ ಹೋರಾಟದಲ್ಲಿ ನಮ್ಮ ದೇಶದ ಹತ್ತು ಜನ ಯೋಧರು ಹುತಾತ್ಮರಾದರು ಮತ್ತು ಒಂಭತ್ತು ಜನ ಚೀನಾದ ಆಕ್ರಮಣಕಾರರನ್ನು ಬಂಧಿಸಲಾಯಿತು. ಈ ವಿಜಯದ ನೆನೆಪಿಗಾಗಿ ಪ್ರತಿ ವರ್ಷ ಅ.21 ರಂದು ಪೊಲೀಸ್ ಹುತಾತ್ಮ ದಿವವನ್ನು ಆಚರಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಹುತಾತ್ಮರಾದ ಪೊಲೀಸ್ ಕುಟುಂಬದವರು ಹಾಜರಿದ್ದರು



