ಡಿವಿಜಿ ಸುದ್ದಿ, ಬೆಂಗಳೂರು: ವಿಜ್ಞಾನ, ತಂತ್ರಜ್ಞಾನದಿಂದ ಇಡೀ ದೇಶದ ಜನರನ್ನು ಒಗ್ಗೂಡಿಸಲು ಸಾಧ್ಯವಿದ್ದು, ದೇಶದ ಅಭಿವೃದ್ಧಿ ವಿಜ್ಞಾನ ತಂತ್ರಜ್ಞನದ ಮೇಲೆ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಳಿದ್ದಾರೆ.
ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನವ ಭಾರತಕ್ಕೆ ತಂತ್ರಜ್ಞಾನ ಬೇಕಿದೆ. ಬೆಂಗಳೂರು ಮೊದಲು ಗಾರ್ಡನ್ ಸಿಟಿಯಾಗಿತ್ತು, ಇಂದು ಸ್ಟಾರ್ಟ್ ಅಪ್ ಕೇಂದ್ರವಾಗಿದೆ. ಜಗತ್ತು ಬೆಂಗಳೂರಿನತ್ತ ಮುಖ ಮಾಡುತ್ತಿದೆ. ಭಾರತವನ್ನು ಸಮಾಜದೊಂದಿಗೆ ಜೋಡಿಸುವ ಕೆಲಸವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.
LIVE: PM Shri @narendramodi addresses 107th Session of Indian Science Congress in Karnataka. #KarnatakaWithModi https://t.co/FxzDscPjxh
— BJP (@BJP4India) January 3, 2020
ದೇಶದಲ್ಲಿ ಉತ್ಪಾದನೆಯಾಗುವ ಸ್ಮಾರ್ಟ್ ಫೋನ್‍ಗಳು ಜನರನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಭಾಗಗಳು ಅಭಿವೃದ್ಧಿ ಹೊಂದಿವೆ. ಸ್ವಚ್ಛ ಭಾರತ ಯೋಜನೆಯಿಂದ ಇಂದಿನ ಆಯುಷ್ಮಾನ್ ಭಾರತ್ ಯೋಜನೆಯ ಫಲ ಜನರಿಗೆ ತಲುಪಲು ತಂತ್ರಜ್ಞಾನ ಪಾತ್ರ ಪ್ರಮುಖವಾಗಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ರೈತರ ಖಾತೆಗೆ ನಗದು ಜಮಾವಣೆ ಆಗಲು ತಂತ್ರಜ್ಞಾನದಿಂದ ಸಾಧ್ಯವಾಯಿತು . ದೇಶದ ಅಭಿವೃದ್ಧಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ನಿಂತಿದೆ ಎಂದರು.
ತಂತ್ರಜ್ಞಾನದಿಂದಾಗಿ ಸರ್ಕಾರದ ಯೋಜನೆಗಳು ವೇಗ ಪಡೆದುಕೊಂಡಿವೆ. ಸರ್ಕಾರ ಮತ್ತು ಫಲಾನುಭವಿಗಳ ನಡುವಿನ ಅಂತರ ತಂತ್ರಜ್ಞಾನದಿಂದ ಕಡಿಮೆ ಆಗಿದೆ. ಇಂದು ಇ-ಕಾಮರ್ಸ್ ನಿಂದಾಗಿ ವ್ಯವಹಾರಗಳು ಕ್ಷಣಾರ್ಧದಲ್ಲಿ ಬೆರಳ ತುದಿಯಲ್ಲಿ ನಿಂತಿದೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೂ ತಂತ್ರಜ್ಞಾನ ಸೌಲಭ್ಯ ಸಿಗುವಂತಾಗಬೇಕಿದೆ ಎಂದರು.
ಜಲ್ ಮಿಷನ್ ಅಭಿಯಾನ ಸಹ ತಂತ್ರಜ್ಞಾನದಿಂದ ಸಾಧ್ಯವಾಗಲಿದೆ. ಸುಧಾರಿತ ಮತ್ತು ಕಡಿಮೆ ಖರ್ಚಿನಲ್ಲಿ ಹೇಗೆ ಸಿಗಬೇಕು ಎಂಬುದರ ಬಗ್ಗೆ ನೀವು ಕೆಲಸ ಮಾಡಬೇಕಿದೆ. ಅದೇ ರೀತಿ ಸುಧಾರಿತ ಬೀಜ ಮತ್ತು ರಸಗೊಬ್ಬರ ಉತ್ಪಾದನೆ, ರೈತರಿಗೆ ಅನುಕೂಲವಾಗಿ ತಂತ್ರಜ್ಞಾನ ಮತ್ತು ಬಳಕೆಯಾದ ನೀರಿನ ಪುನರ್ ಬಳಕೆ ಕುರಿತ ಸುಧಾರಿತ ವ್ಯವಸ್ಥೆಗಳು ಮತ್ತು ಪರಿಕರಗಳು, ಮಣ್ಣಿನ ಫಲವತ್ತತೆ ಕಾಪಾಡುವ ಹೊಣೆಯೂ ನಿಮ್ಮ ಮೇಲಿದೆ ಎಮದು ತಿಳಿಸಿದರು.
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋದು, ಪ್ಲಾಸ್ಟಿಕ್ ಪರ್ಯಾಯ ವಸ್ತುಗಳ ಸಂಶೋಧನೆ ಸೇರಿದಂತೆ ಇನ್ನಿತರ ಅನ್ವೇಷನೆಗಳು ಇಂದು ನಡೆಯಬೇಕಿದೆ. ಪ್ಲಾಸ್ಟಿಕ್ ತ್ಯಾಜ್ಯದ ಪುನರ್ ಬಳಕೆಯ ಬಗ್ಗೆ ಚಿಂತಿಸಬೇಕಿದೆ. ಒಂದೇ ಬಾರಿ ಬಳಕೆಯಾಗುವ ಪ್ಲಾಸ್ಟಿಕ್ ನಿಂದ ಭಾರತ ಮುಕ್ತವಾಗಬೇಕಿದೆ. 2022ರ ವೇಳೆಗೆ ಕಚ್ಚಾತೈಲದ ಬಳಕೆ ಶೇ.10ರಷ್ಟು ಕಡಿಮೆಗೊಳಿಸುವ ಸಾಧ್ಯತೆಗಳಿವೆ ಎಂದರು.



