ಡಿವಿಜಿ ಸುದ್ದಿ, ಬೆಂಗಳೂರು: ಯಾರಿಗೆ ಫೋನ್ ಟ್ಯಾಪ್ ಮಾಡಿ ಅನುಭವ ಇದೆಯೋ, ಅವರೇ ಈಗ ಟ್ಯಾಪಿಂಗ್ ಬಗ್ಗೆ ಮಾತಾಡ್ತಿರೋದು ಆಶ್ಚರ್ಯ ಎಂದು ಸಚಿವ ಆರ್ ಅಶೋಕ್ , ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಅವರದ್ದೇ ಸರ್ಕಾರ ಇದ್ದಾಗ ಫೋನ್ ಟ್ಯಾಪ್ ಆಗಿದ್ದು ಗೊತ್ತಿದೆ. ಹಿಂದಿನ ಸರ್ಕಾರದ ಫೋನ್ ಟ್ಯಾಪ್ ತನಿಖೆ ಒಂದು ಹಂತಕ್ಕೆ ಬರುತ್ತಿದೆ. ಯಾರಿಗೆ ಫೋನ್ ಟ್ಯಾಪ್ ಮಾಡಿ ಅನುಭವ ಇದೆಯೋ, ಅವರೇ ಈಗ ಟ್ಯಾಪಿಂಗ್ ವಿಚಾರ ಮಾತಾಡ್ತಿರೋದು ಆಶ್ಚರ್ಯ ತಂದಿದೆ ಎಂದರು.

ಇದು ಭೂತದ ಬಾಯಲ್ಲಿ ಭಗದ್ಗೀತೆ ಹೇಳಿದಂತೆ ಕಾಣಿಸ್ತಿದೆ. ಬಸವರಾಜ್ ಬೊಮ್ಮಾಯಿ ಆ ತರಹದ ಸಂಸ್ಕೃತಿಯಿಂದ ಬಂದವರಲ್ಲ. ಇದೆಲ್ಲ ಕಾಂಗ್ರೆಸ್ ನವರದ್ದೇ ಸಂಸ್ಕೃತಿ. ಫೋನ್ ಟ್ಯಾಪ್ ಮಾಡುವ ಅಭ್ಯಾಸ, ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ ಎಂದರು.
ಕಮಿಷನರ್ ಬಿಜೆಪಿ ಏಜೆಂಟ್ ಅಂತ ಹೇಳಿದರೆ ಹೇಗೆ? ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರು ಧರ್ಮಾತ್ಮರಾ?, ಕಾಂಗ್ರೆಸ್ ಈ ಸಂಸ್ಕೃತಿ ಬಿಟ್ಟು ಬಿಡಿ. ಈ ದಬ್ಬಾಳಿಕೆ, ಆರೋಪ ನಿಮಗೆ ಬಂದಿರುವ ಬಳುವಳಿ. ಯಾರನ್ನೋ ರಕ್ಷಣೆ ಮಾಡೋದಕ್ಕೆ ಕಮಿಷನರ್ ಗೆ ವಾರ್ನಿಂಗ್ ಕೊಡೋದು ಸರಿಯಲ್ಲ ಎಂದು ಡಿಕೆಶಿಗೆ ತಿರುಗೇಟು ನೀಡಿದರು.



