ನವದೆಹಲಿ: ಅಡುಗೆ ಅನಿಲ ಎಲ್‌ಪಿಜಿ ದರವನ್ನು ಕೇಂದ್ರ ಸರ್ಕಾರ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್ ಬೆಲೆ 144.5 ರೂಪಾಯಿ ಹೆಚ್ಚಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಇಂಧನ ದರ ಭಾರೀ ಏರಿಕೆಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ದರ ಹೆಚ್ಚಳದಿಂದ ಪ್ರತಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 714 ರೂಪಾಯಿಂದ 858.50 ರೂಪಾಯಿ ಆಗಲಿದೆ. ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಸರ್ಕಾರ ನೀಡುವ ಸಬ್ಸಿಡಿ ಬಹುತೇಕ ಎರಡರಷ್ಟು ಹೆಚ್ಚಳ ಮಾಡಿದ್ದು, ಇದರಿಂದ ದರ ಹೆಚ್ಚಳವಾದರೂ ಸಾರ್ವಜನಿಕರಿಗೆ ಯಾವುದೇ ರೀತಿ ಹೊರೆಯಾಗುವುದಿಲ್ಲ ಎನ್ನಲಾಗಿದೆ. ವರ್ಷಕ್ಕೆ 14.2 ಕೆಜಿಯ 12 ಸಿಲಿಂಡರ್‌ಗಳನ್ನು ಪಡೆಯುವವರು ಹೆಚ್ಚುವರಿ ಸಬ್ಸಿಡಿ ಪಡೆಯಲಿದ್ದಾರೆ.
ಪ್ರತಿ ಸಿಲಿಂಡರ್‌ಗೆ ಸರ್ಕಾರ ನೀಡುತ್ತಿದ್ದ 153.86 ಸಬ್ಸಿಡಿಯನ್ನು 291.48 ರೂಪಾಯಿಗೆ ಏರಿಕೆ ಮಾಡಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಬ್ಸಿಡಿ174.86 ರಿಂದ 312.48 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಪಡೆಯುವ ಗ್ರಾಹಕರ ಬ್ಯಾಂಕ್ ಖಾತೆಗೆ ಎಂದಿನಂತೆ ಸಬ್ಸಿಡಿ ಜಮೆಯಾಗಲಿದೆ. ಸಬ್ಸಿಡಿ ಅನ್ವಯವಾದ ನಂತರ ಸಾಮಾನ್ಯ ಬಳಕೆದಾರರಿಗೆ ಪ್ರತಿ ಸಿಲಿಂಡರ್ ಬೆಲೆ 567.02 ರೂಪಾಯಿ ಹಾಗೂ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಬೆಲ 546.02 ರೂಪಾಯಿ ಆಗಲಿದೆ.



