ಲಕ್ನೋ: ಭಾರತದ ಸೈಕಲ್ ತಯಾರಕಾ ಕಂಪನಿಯಾದ ‘ಅಟ್ಲಾಸ್’ ವಿಶ್ವ ಬೈಸಿಕಲ್ ದಿನಾಚರಣೆಯ ದಿನವೇ ದಿಢೀರ್ ಬಾಗಿಲು ಮುಚ್ಚಿದೆ .
ತನ್ನ ನೌಕರಿಗೆ ಯಾವುದೇ ಸೂಚನೆ ನೀಡದೇ ಬಾಗಿಲು ಮುಚ್ಚಿದ ಪರಿಣಾಮ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗವಿಲ್ಲದೆ ಬೀದಿಗೆ ಬಂದಿದ್ದಾರೆ. ಭಾರೀ ನಷ್ಟದ ಕಾರಣ ಕಂಪನಿಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿದೆ. ಉತ್ತರ ಪ್ರದೇಶದ ಘಾಝಿಯಾಬಾದ್‍ನಲ್ಲಿದ್ದ ಅತೀ ದೊಡ್ಡ ಫ್ಯಾಕ್ಟರಿ ಮುಚ್ಚಲಾಗಿದ್ದು, ಇದು ಭಾರತದ ಸೈಕಲ್ ತಯಾರಿಕಾ ಕಂಪೆನಿಯಾದ ಅಟ್ಲಾಸ್ನ ಕೊನೆಯ ಘಟಕವೂ ಮುಚ್ಚಿದಂತಾಗಿದೆ.
ಕೋವಿಡ್ 19 ಹಿನ್ನೆಲೆ ಇಡೀ ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಕಂಪನಿಯನ್ನು ಮುಚ್ಚಲಾಗಿತ್ತು. ಜೂನ್ 1 ರಂದು ಕಂಪನಿಯನ್ನು ತೆರೆಯಲಾಗಿತ್ತು. ನೌಕರರು ಸಂಭ್ರಮದಿಂದ ಕೆಲಸಕ್ಕೆ ಹಾಜರಾಗಿದ್ದರು. 2 ದಿನ ಕೆಲಸ ಮಾಡಿದ್ದ ನೌಕರರು, ಜೂನ್ 3 ರಂದು ನೌಕರರು ಕೆಲಸಕ್ಕೆ ತೆರಳಿದಾಗ ಕಂಪನಿಯ ಮುಖ್ಯ ದ್ವಾರದಲ್ಲಿದ್ದ ನೋಟಿಸ್ ಅಂಟಿಸಲಾಗಿತ್ತು. ಆ ನೋಟಿಸ್ ನೋಡಿದ ನೌಕರರು ಶಾಕ್ ಆಗಿದ್ದಾರೆ. ಆರ್ಥಿಕ ನಷ್ಟ ಸರಿದೂಗಿಸಲು ಸಾಧ್ಯವಾಗದ ಕಾರಣ ಕಂಪನಿಯನ್ನು ಮುಚ್ಚಲಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಇದಕ್ಕೂ ಮೊದಲು 2014ರ ಡಿಸೆಂಬರ್ ವೇಳೆ ಮಧ್ಯಪ್ರದೇಶದ ಮಲಾನ್‍ಪುರ, 2018ರ ಫೆಬ್ರವರಿಯಲ್ಲಿ ಹಯಾರ್ಣದ ಸೋನಿಪತ್ ನಲ್ಲಿದ್ದ ಘಟಕವನ್ನು ಕಂಪನಿ ಮುಚ್ಚಲಾಗಿತ್ತು. 1989ರಲ್ಲಿ ಆರಂಭವಾದ ಘಾಝಿಯಾಬಾದ್ ಘಟಕ ಅಟ್ಲಾಸ್ ಸಂಸ್ಥೆಯ ಅತ್ಯಂತ ದೊಡ್ಡ ಘಟಕ, ಹೆಚ್ಚಿನ ಕಾರ್ಮಿಕರು ಆರಂಭದಿಂದಲೂ ಇಲ್ಲೇ ಕೆಲಸ ಮಾಡುತ್ತಿದ್ದು, ಇಲ್ಲಿ ತಿಂಗಳಿಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ಸೈಕಲ್ ಗಳನ್ನು ಇಲ್ಲಿ ತಯಾರಿಸಲಾಗುತ್ತಿತ್ತು.
ಹೀಗೆ ದಿಢೀರ್ ಬಂದ್ ಮಾಡಿದರೆ ನಾವು ಮುಂದೆ ಏನು ಮಾಡಬೇಕು ಎಂದು ನೌಕರರು ಕಣ್ಣೀರು ಹಾಕಿದ್ದಾರೆ. ನೌಕರರು ಈಗ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
1951ರಲ್ಲಿ ಸೋನಿಪತ್‍ನಲ್ಲಿ ತಗಡಿನ ಚಪ್ಪರದಲ್ಲಿ ಜಾನಕಿದಾಸ್ ಕಪೂರ್ ಅಟ್ಲಾಸ್ ಸೈಕಲ್ ಇಂಡಸ್ಟ್ರೀಸ್ ಲಿ. ಪ್ರಥಮ ಘಟಕವನ್ನು ಸ್ಥಾಪಿಸಿದ್ದರು. ಒಂದು ವರ್ಷದಲ್ಲಿ ಘಟಕ 25 ಎಕರೆಗೆ ವಿಸ್ತಾರಗೊಂಡಿತ್ತು. ಮೊದಲ ವರ್ಷವೇ 12 ಸಾವಿರ ಸೈಕಲ್ ತಯಾರಿಸಿ ಮಾರಾಟ ಮಾಡಿತ್ತು. 1965ರ ವೇಳೆಗೆ ಭಾರತದ ಅತ್ಯಧಿಕ ಸೈಕಲ್ ಉತ್ಪಾದಿಸುವ ಸಂಸ್ಥೆಯೆಂಬ ಹೆಗ್ಗಳಿಕೆ ಪಡೆದಿತ್ತು.