ನವದೆಹಲಿ: ರಾಷ್ಟ್ರವಾದ ಮತ್ತು ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಪ್ರಸ್ತುತ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಹೇಳಿದ್ದಾರೆ.
ಜವಾಹರಲಾಲ್ ನೆಹರು ಅವರ ಕುರಿತ ‘ಹೂ ಈಸ್ ಭಾರತ್ ಮಾತಾ’ ಪುಸ್ತಕ ಬಿಡುಗಡೆ ಮಾತನಾಡಿದ ಅವರು, ಯುದ್ಧ ಮತ್ತು ಅಪ್ಪಟ ಭಾವನಾತ್ಮಕ ಕಲ್ಪನೆಯ ದೇಶ ನಿರ್ಮಿಸುವ ಸಲುವಾಗಿ ರಾಷ್ಟ್ರವಾದ ಮತ್ತು ಭಾರತ್ ಮಾತಾ ಕೀ ಜೈ ಘೋಷಣೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ವಿಶ್ವದಲ್ಲಿ ಭಾರತ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಜವಾಹರಲಾಲ್ ನೆಹರು ಅವರ ಪರಿಶ್ರಮವಿದೆ. ಅವರು ನವ ಭಾರತದ ಶಿಲ್ಪಿ. ಅತ್ಯಂತ ಕಷ್ಟದ ದಿನಗಳಲ್ಲಿ ನೆಹರು ವಿಭಿನ್ನ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನದಿಂದ ದೇಶ ಮುನ್ನಡೆಸಿದ್ದಾರೆ. ಈ ದೇಶವನ್ನು ಸಾಮರಸ್ಯ ಮತ್ತು ಏಕತೆಯ ಉದ್ದೇಶಗಳೊಂದಿಗೆ ಕಟ್ಟಿದ್ದಾರೆ ಎಂದು ತಿಳಿಸಿದರು.
ನೆಹರು ಅವರು ಅನೇಕ ವಿಶ್ವವಿದ್ಯಾಲಯಗಳಿಗೆ, ಅಕಾಡೆಮಿಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ಆದರೆ, ಅವರು ನಿರೀಕ್ಷಿಸಿದ ದೇಶವಾಗಿ ಭಾರತವಿಲ್ಲ ಎಂದರು. ಕೆಲವರು ಪೂರ್ವಾಗ್ರಹಪೀಡಿತರಾಗಿ ನೆಹರು ಅವರನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ನನಗೆ ವಿಶ್ವಾಸವಿದೆ. ಇತಿಹಾಸಕ್ಕೆ ಸುಳ್ಳು ನಿರಾಕರಿಸಿ ಸತ್ಯಾಂಶ ಬಿಂಬಿಸುವ ಶಕ್ತಿ ಇದೆ ಎಂದರು.



