ಅಹಮದಾಬಾದ್: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಭಾರತ, ಅಮೆರಿಕವನ್ನು ಗೌರವಯುತವಾಗಿ ಕಾಣುತ್ತಿದೆ. ಅದೇ ರೀತಿ ಅಮೆರಿಕ ಭಾರತವನ್ನು ಗೌರವಯುತವಾಗಿ ಕಾಣುತ್ತಿದೆ. ಹೀಗಾಗಿ ನಮ್ಮದು ಆತ್ಮೀಯ ಸಂಬಂಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೊಟೆರಾ ಸ್ಟೇಡಿಯಂನಲ್ಲಿ ನೆರೆದಿದ್ದ ಲಕ್ಷಾಂತರ ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮೆರಿಕ ‘ಸ್ವಾತಂತ್ರ್ಯದ ಪ್ರತಿಮೆ’ ಬಗ್ಗೆ ಗೌರವಪಟ್ಟುಕೊಂಡರೆ, ಭಾರತ ಐಕ್ಯತಾ ಪ್ರತಿಮೆಯ ಬಗ್ಗೆ ಹೆಮ್ಮಪಡುತ್ತದೆ. ಅಮೆರಿಕದಲ್ಲಿರುವ ಭಾರತೀಯರು ನಮಗೆ ಉತ್ತಮ ಸ್ನೇಹಿತರು, ನೆರೆಯವರು ಆಗಿದ್ದಾರೆ. ನಮ್ಮ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಅದಕ್ಕಾಗಿ ಅಮೆರಿಕದ ಎಲ್ಲ ಜನರೂ ನಿಮಗೆ ಧನ್ಯವಾದ ಹೇಳುತ್ತಾರೆ. ವಿಶ್ವವೇ ನಿಬ್ಬೆರಾಗುವಂತೆ ನಮಗೆ ಆತ್ಮೀಯ ಸ್ವಾಗತ ಸಿಕ್ಕಿದೆ. ಇದಕ್ಕೆ ನಾವು ಧನ್ಯವಾದ ಹೇಳುತ್ತೇನೆ ಎಂದರು.
ಭಾರತದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಸೇರಿದಂತೆ ಹಲವು ಧರ್ಮಗಳ ಆಗರ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿಕೊಂಡು ಅಭಿವೃದ್ಧಿ ಹೊಂದುತ್ತಿರುವ ಭಾರತ ವಿಶ್ವಕ್ಕೆ ಮಾದರಿ. ನಾಳೆ ರಕ್ಷಣಾ, ವ್ಯಾಪಾರ ಜೊತೆ ಬಾಹ್ಯಾಕಾಶ ಸೇರಿದಂತೆ ಹಲವು ವಿಚಾರಗಳ ಒಪ್ಪಂದಕ್ಕೆ ಸಹಿ ಬೀಳಲಿದೆ. ಜಗತ್ತಿನ ಅತ್ಯುತ್ತಮ ಮಿಲಿಟರಿ ಉಪಕರಣವನ್ನು ನಾವು ತಯಾರಿಸುತ್ತಿದ್ದೇವೆ. 3 ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ. ಭಾರತದೊಂದಿಗೆ ಅಮೆರಿಕ ಅದ್ಭುತ ಒಪ್ಪಂದವೊಂದಕ್ಕೆ ಸಹಿ ಹಾಕಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು. ಒಪ್ಪಂದದ ಬಗ್ಗೆ ಮಾತನಾಡುವಾಗ ಪ್ರಧಾನಿ ಮೋದಿ ಅವರ ಜೊತೆಗೆ ಚೌಕಾಸಿ ಮಾಡೋದು ತುಂಬಾ ಕಷ್ಟ ಎಂದು ವ್ಯಂಗ್ಯವಾಗಿ ಹೇಳಿದರು.
ಟೀ ಮಾರುತ್ತಿದ್ದ ಮೋದಿ ಇಂದು ಪ್ರಧಾನಿ ಆಗಿದ್ದಾರೆ. ಎರಡನೇ ಬಾರಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ್ದಾರೆ. ಮೋದಿಯಂತೆ ಬಾಳುವುದು ಬಹಳ ಕಷ್ಟ. ರಾತ್ರಿ, ಹಗಲು ಭಾರತದ ಅಭಿವೃದ್ಧಿ ವಿಚಾರದ ಬಗ್ಗೆ ಯೋಚನೆ ಮಾಡುತ್ತಾರೆ. 70 ವರ್ಷದಲ್ಲಿ ಭಾರತ ಬಹಳ ವೇಗದಲ್ಲಿ ಅಭಿವೃದ್ಧಿ ಆಗುತ್ತಿದೆ. ಬಡತನವನ್ನು ಮೇಲಕ್ಕೆ ಎತ್ತಲು ಮೋದಿ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಭಾರತ ಬಲಿಷ್ಠವಾಗಿದ್ದು, ಇಷ್ಟೊಂದು ದೊಡ್ಡ ಸ್ವಾಗತ ನಮಗೆ ಸಿಗುತ್ತದೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ಹಾಡಿ ಹೊಗಳಿದರು.
ತಮ್ಮ ಭಾಷಣದಲ್ಲಿ ವಿವೇಕಾನಂದರನ್ನು ಸ್ಮರಿಸಿದ ಟ್ರಂಪ್, ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ಅವರಂತಹ ಸ್ಟಾರ್ ಕ್ರಿಕೆಟ್ ಆಟಗಾರರನ್ನು ಹೊಂದಿದ ದೇಶ ಭಾರತ. ಬಾಲಿವುಡ್ ಸಿನಿಮಾಗಳಾದ ಡಿಡಿಎಲ್‍ಜೆ, ಶೋಲೆ ಸಿನಿಮಾಗಳು ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದು ಹೇಳಿದರು.
ಉಗ್ರರ ವಿರುದ್ಧ ಭಾರತ ಮತ್ತು ಅಮೆರಿಕ ಹೊರಾಡುತ್ತಿದೆ. ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಹಿಂದೆಂದು ಕಾಣದ ರೀತಿಯಲ್ಲಿ ಏರಿಕೆಯಾಗಿದೆ. ಭಾರತ ನಮ್ಮ ಅತಿ ದೊಡ್ಡ ರಫ್ತು ರಾಷ್ಟ್ರವಾಗಿದ್ದರೆ, ಭಾರತಕ್ಕೆ ಅಮೆರಿಕ ಅತಿ ದೊಡ್ಡ ರಫ್ತು ರಾಷ್ಟ್ರ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಒದಗಿಸಲು ನಾವು ಬದ್ಧರಾಗಿದ್ದೇವೆ. ಇಸ್ಲಾಮಿಕ್ ಉಗ್ರರ ಸವಾಲುಗಳಿಗೆ ನಾವು ಜತೆಗೂಡಿ ಉತ್ತರ ಕಂಡುಕೊಂಡುಕೊಳ್ಳುತ್ತೇವೆ . ಭಾರತ ಮತ್ತು ಅಮೆರಿಕಕ್ಕೆ ದೇವರ ಆಶೀರ್ವಾದ ಸಿಗಲಿ ಎಂದು ಟ್ರಂಪ್ ನುಡಿದರು.
ನಮಸ್ತೆ ಟ್ರಂಪ್ ಎಂದು ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ , ವಿಶ್ವ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ಒಂದಾಗುತ್ತಿದೆ. 5 ತಿಂಗಳ ಹಿಂದೆ ಅಮೆರಿಕದ ಹ್ಯೂಸ್ಟನ್ ನಲ್ಲಿ ನನಗೆ ದೊಡ್ಡ ಸ್ವಾಗತ ನೀಡಲಾಗಿತ್ತು. ಅದೇ ರೀತಿಯಾಗಿ ಇಂದು ಅಮೆರಿಕದ ಅಧ್ಯಕ್ಷರು ಮತ್ತು ಕುಟುಂಬದವರಿಗೆ ಸ್ವಾಗತ ನೀಡಲಾಗುತ್ತಿದೆ ಎಂದರು.