ನವದೆಹಲಿ: ಲಾಕ್‍ಡೌನ್ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದು ಹೆಚ್ಚಿನ ರಾಜ್ಯಗಳು ಲಾಕ್ ಡೌನ್ ಮುಂದುವರಿಸುವಂತೆ ಮನವಿ ಮಾಡಿದ್ದಾರೆ.
ಮೇ 15ರವರೆಗೂ ಲಾಕ್‍ಡೌನ್ ಮುಂದುವರಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರ ಬರಬೇಕಿದೆ. ಈ ವಾರದ ಅಂತ್ಯದಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಿಲಿದ್ದು, ಈ ಸಂದರ್ಭದಲ್ಲಿ ಲಾಕ್‍ಡೌನ್ ವಿಸ್ತರಣೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂದಿನ ಸಭೆಯಲ್ಲಿ ಒಂಭತ್ತು ರಾಜ್ಯಗಳಿಗೆ ಸಿಎಂ ಗಳಿಗೆ ಮಾತ್ರ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು. ಮೇಘಾಲಯ, ಮಿಜೋರಾಂ, ಪುದುಚೇರಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಒಡಿಶಾ, ಬಿಹಾರ, ಗುಜರಾತ್, ಹರಿಯಾಣ ಮುಖ್ಯಮಂತ್ರಿಗಳು ಸಭೆಯಲ್ಲಿ ಮಾತನಾಡಿದರು. ಉಳಿದ ಎಲ್ಲ ರಾಜ್ಯಗಳ ಸಿಎಂ ಗಳು ಪತ್ರ ಮೂಲಕ ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿ ಮುಂದಿಟ್ಟರು.
ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ, ತುರ್ತು ಅವಶ್ಯಕತೆಗಳ ವಿನಾಯಿತಿಯೊಂದಿಗೆ ಲಾಕ್‍ಡೌನ್ ಮುಂದುವರಿಸಿ. ವೈದ್ಯಕೀಯ ಅವಶ್ಯಕತೆಗಳು ಹೊರತುಪಡಿಸಿ ಅಂತರ್ ಜಿಲ್ಲೆ, ರಾಜ್ಯಗಳ ಗಡಿ ಬಂದ್ ಮಾಡಿ ಎಂದು ಸಲಹೆ ನೀಡಿದರು.
ಒಡಿಶಾದ ನವೀನ್ ಪಟ್ನಾಯಕ್ ಮಾತನಾಡಿ ಪ್ರಮುಖ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿ ಲಾಕ್‍ಡೌನ್ ಮುಂದುವರಿಸಬೇಕು. ಸಾರ್ವಜನಿಕ ಸಭೆಗಳು, ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ರಾಜ್ಯದ ಒಳಗಿನ ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದರು.
ಹಿಮಾಚಲದ 12 ಜಿಲ್ಲೆಗಳಿಗೆ ಯಾವುದೇ ಸಕಾರಾತ್ಮಕ ಪ್ರಕರಣಗಳಿಲ್ಲ. ಬಡ ಮತ್ತು ನಿರ್ಗತಿಕರಿಗೆ ಆರ್ಥಿಕವಾಗಿ ನೆರವು ನೀಡಲು ರಾಜ್ಯವು ಸಿದ್ಧವಾಗಿದೆ. ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವ ಸ್ಥಿತಿಯಲ್ಲಿದ್ದೇವೆ. ಇತರೆ ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಿ ಎಂದು ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಹೇಳಿದರು.
ಪುದುಚೇರಿ ಸಿಎಂ ವಿ ನಾರಾಯಣಸ್ವಾಮಿ ಮಾತನಾಡಿ ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಕೇಂದ್ರ ಸರ್ಕಾರ ಒದಗಿಸಬೇಕು. ಕೊರೊನಾ ವಿರುದ್ಧ ಹೋರಾಟಕ್ಕೆ ಹಣಕಾಸಿನ ನೆರವು ನೀಡಿ. ಮೇ 3ರ ಬಳಿಕ ಲಾಕ್‍ಡೌನ್ ಬಳಿಕ ಕೈಗಾರಿಕೆ ತೆರೆಯಲು ಅವಕಾಶ ನೀಡಿ ಎಂದು ಮನವಿ ಮಾಡಿದರು.



