ಡಿವಿಜಿ ಸುದ್ದಿ, ಕಲಬುರ್ಗಿ: ಕೊರೊನಾ ವೈರಸ್ ತಗುಲಿ ಮೃತಪಟ್ಟ ಮೊಹ್ಮದ್ ಹುಸೇನ್ ಸಿದ್ದಿಕಿ (76) ಅವರೊಂದಿಗೆ ಮಾತನಾಡಿದ್ದ 46 ಜನ ಸೇರಿದಂತೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 71 ಜನರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. ಆ 71 ಜನರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ಜನ ಕುಟುಂಬ ಸದಸ್ಯರಲ್ಲಿ ಕೊರೊನಾ ಇರುವ ಶಂಕೆ ಇದ್ದು, ಅವರ ಕಫ ಹಾಗೂ ರಕ್ತದ ಮಾದರಿಗಳನ್ನು ಈಗಾಗಲೇ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇಂದು ವರದಿ ಬರುವ ನಿರೀಕ್ಷೆ ಇದೆ ಇಎಸ್ಐ ಆಸ್ಪತ್ರೆಯಲ್ಲಿ ಸಿದ್ದಿಕಿ ಅವರ ಕುಟುಂಬದ ನಾಲ್ವರು ಸದಸ್ಯರನ್ನು ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ಸೌದಿ ಅರೇಬಿಯಾದಿಂದ ತವರಿಗೆ ಬಂದ ಬಳಿಕ ಸಿದ್ದಿಕಿ ಅವರು ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಉಳಿದುಕೊಂಡ ಮಾಹಿತಿ ಬಂದಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕುವಂತೆ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಸೂಚಿಸಲಾಗಿದೆ ಎಂದರು.
ಬಸ್ ಸಂಚಾರ ಕಡಿತ
ಕಲಬುರ್ಗಿ ಜಿಲ್ಲೆಗೆ ಬೇರೆ ಜಿಲ್ಲೆಯ ಜನರು ಬರುವುದನ್ನು ತಪ್ಪಿಸಲು ಸಾರಿಗೆ ಸಂಸ್ಥೆಯ ಬಸ್ ಗಳ ಸಂಚಾರವನ್ನು ಕಡಿಮೆಗೊಳಿಸಲಾಗಿದೆ. ಈ ಸಂಬಂಧ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೂಚಿಸಲಾಗಿದೆ. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬರಬೇಡಿ. ಅಗತ್ಯ ವಸ್ತುಗಳನ್ನು ಖರೀದಿ ಮಾಡಿದ ತಕ್ಷಣ ವಾಪಸ್ ಮನೆಗೆ ತೆರಳಬೇಕು ಎಂದರು.
ಸರ್ಕಾರಿ ಸೇವೆ ವ್ಯತ್ಯಯ
ಸರ್ಕಾರಿ ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಗೊಳಿಸಲಾಗುತ್ತಿದೆ. ಉಪನೋಂದಣಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಕಂದಾಯ ಇಲಾಖೆಯಲ್ಲಿ ಪಹಣಿ, ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್ ನೀಡುವ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ . ಕೊರೊನಾ ಶಂಕಿತರು ಅಥವಾ ಕೆಮ್ಮು, ನೆಗಡಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ತಾವಾಗಿಯೇ ಹೇಳಲಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಬೇರೆಯವರಾದರೂ ಮಾಹಿತಿ ನೀಡಲಿ ಎಂಬ ಉದ್ದೇಶದಿಂದ ಸಹಾಯವಾಣಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಮೃತ ವ್ಯಕ್ತಿಯೊಂದಿಗೆ ಒಡನಾಟ ಹೊಂದಿದ್ದ ಹಾಗೂ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 71 ಜನರಿಗೂ ಜಿಲ್ಲಾಡಳಿತದಿಂದಲೇ ಅವರ ಮನೆಗೆ ಊಟ ತಲುಪಿಸಲಾಗುತ್ತಿದೆ. ಅವರಿಗೆ ಮನೆಯಲ್ಲಿಯೇ 14 ದಿನಗಳವರೆಗೆ ಪ್ರತ್ಯೇಕವಾಗಿ ಇರಬೇಕು ಎಂದ ಸೂಚಿಸಲಾಗಿದೆ.
.