ಡಿವಿಜಿ ಸುದ್ದಿ, ಮಡಿಕೇರಿ: ಕೇರಳ ರಾಜ್ಯದ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿದೆ. ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕೊಡಗು ಮತ್ತು ಕೇರಳ ನಡುವಿನ ರಸ್ತೆ ಮಾರ್ಗವನ್ನು ಓಪನ್ ಮಾಡುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣ ಕುರಿತು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ, ಅಗತ್ಯ ವಸ್ತುಗಳಿಗೆ ಕೊಡಗಿನೊಂದಿಗೆ ಸಂಪರ್ಕವಿರುವ ರಸ್ತೆಯೊಂದಿಗೆ ವ್ಯವಹರಿಸುವುದು ತೀರಾ ಕಡಿಮೆ. ಕೇರಳಕ್ಕೆ ಗುಂಡ್ಲುಪೇಟೆ ಮಾರ್ಗ ಹತ್ತಿರವಿರುವುದರಿಂದ ಅದೇ ಮಾರ್ಗದ ಮೂಲಕ ವ್ಯವಹರಿಸುತ್ತಿದ್ದಾರೆ. ಕೊಡಗು ಮತ್ತು ಕೇರಳ ನಡುವಿನ ರಸ್ತೆ ಸಂಪರ್ಕ ಬಂದ್ ಮಾಡಿರುವ ಜಿಲ್ಲಾಧಿಕಾರಿಯ ಕ್ರಮ ಸರಿಯಾಗಿಯೇ ಇದೆ ಎಂದರು.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ ಕೊಡಗಿನಲ್ಲಿ ಮಾತ್ರ ಕೊರೊನಾ ನಿಯಂತ್ರಣದಲ್ಲಿ ಇದೆ. ಕೇರಳದ ಕಾಸರಗೋಡು ಮತ್ತು ಕಣ್ಣೂರಿನಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತರು ಇರುವುದರಿಂದ ಕೊಡಗಿಗೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಹೆದ್ದಾರಿ ರೀ ಓಪನ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.



