ಡಿವಿಜಿ ಸುದ್ದಿ, ಮೈಸೂರು: ನಮ್ಮ ಖಾತೆಗೆ ಸಬಂಧಿಸಿದಂತೆ 2 ದಿನಗಳಿಗೊಮ್ಮೆ ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತಿದ್ದೇನೆ. ಒಮ್ಮೆಯೂ ಅವರ ಪುತ್ರ ವಿಜಯೇಂದ್ರರನ್ನು ಭೇಟಿ ಮಾಡಿಲ್ಲ. ಅವರು ಯಾವತ್ತೂ ಸೂಪರ್ ಸಿಎಂ ತರಹ ವರ್ತಿಸಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ವಿಚಾರಣೆಯಲ್ಲೂ ವಿಜಯೇಂದ್ರ ಮಧ್ಯ ಪ್ರವೇಶಿಸಿಲ್ಲ. ವರ್ಗಾವಣೆಗೂ ಅವರಿಗೂ ಸಂಬಂಧವೇ ಇಲ್ಲ.ಯಾವ ವಿಷಯದಲ್ಲೂ ಹಸ್ತಕ್ಷೇಪ ನಡೆಸದ ಬಿ.ವೈ.ವಿಜಯೇಂದ್ರ ವಿರುದ್ಧ ಸಿದ್ದರಾಮಯ್ಯ ಈಗ ರಾಜಕೀಯ ಕಾರಣಕ್ಕೆ ಹೇಳಿಕೆ ನೀಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಪುತ್ರ ಏನು ಕಡಲೇಪುರಿ ತಿನ್ನುತ್ತಿದ್ದರಾ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಹುದ್ದೆ ಈಗಂತೂ ಖಾಲಿ ಇಲ್ಲ. ಈಗ ಇರುವ ಮುಖ್ಯಮಂತ್ರಿ ಪಾದರಸದಂತೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಮರೆಯಬಾರದು. ಅಡಗೂರು ಎಚ್.ವಿಶ್ವನಾಥ್ ಒಬ್ಬರೇ ಅಲ್ಲ. ಎಂ.ಟಿ.ಬಿ ನಾಗರಾಜ್, ಶಂಕರ್, ರೋಷನ್‌ಬೇಗ್ ಸೇರಿದಂತೆ ಹಲವರು ವಿಧಾನಪರಿಷತ್ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ. ಇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ ಎಂಬುದು ನಮ್ಮ ಒತ್ತಾಯವೂ ಆಗಿದೆ. ಬಿ.ಎಸ್.ಯಡಿಯೂರಪ್ಪ ಮಾತಿಗೆ ತಪ್ಪುವುದಿಲ್ಲ. ಅವರಿಗೂ ಹೈಕಮಾಂಡ್ ಇದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.



