ಡಿವಿಜಿ ಸುದ್ದಿ, ಬೆಳಗಾವಿ: ತಾಲ್ಲೂಕಿನ ಪೀರನವಾಡಿಯಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವಿವಾದ ಬಗೆಹರಿಯುವುದಕ್ಕೂ ಮುನ್ನ ಸಚಿವರೊಂದಿಗೆ ಚರ್ಚಿಸಿದ್ದೇನೆ. ಪ್ರಕರಣದಲ್ಲಿ ದಾಖಲಾದ ಕೇಸ್ಗಳನ್ನು ವಾಪಸ್ ಪಡೆಯಲಾಗುವುದು ಎಂದು ತಿಳಿಸಿದರು.
ಪ್ರತಿಮೆ ವಿವಾದ ಇಷ್ಟು ಸುಲಭವಾಗಿ ಇತ್ಯರ್ಥ ಆಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಶಿವಾಜಿ ಹಾಗೂ ರಾಯಣ್ಣ ಹೋರಾಟ ಸ್ಮರಣೀಯ. ಇಬ್ಬರೂ ಮಹಾಪುರುಷರು ದೇಶಕ್ಕಾಗಿ ಹೋರಾಡಿದವರು ಎಂದರು.
ಕೆಲ ಸಂಕುಚಿತ ಭಾವನೆಯಿಂದ ರಾಯಣ್ಣ ಹಾಗೂ ಶಿವಾಜಿ ಬೇರೆ ಬೇರೆ ಎನ್ನುವ ಭಾವನೆ ರಾಜ್ಯದಲ್ಲಿತ್ತು. ಬೆಳಗಾವಿಯಲ್ಲಿ ಆಗಿರುವ ಈ ತೀರ್ಮಾನ ಎಲ್ಲ ರಾಷ್ಟ್ರ ಭಕ್ತರಿಗೆ ಸಂತೋಷ ತಂದಿದೆ ಎಂದರು. ರಾಯಣ್ಣ ಹಾಗೂ ಶಿವಾಜಿ ಯಾವ ಜಾತಿ, ಹುಟ್ಟು, ಭಾಷೆ ಮುಖ್ಯವಲ್ಲ, ಇಬ್ಬರೂ ಜಾತಿ, ಪ್ರಾಂತ್ಯ ಹಾಗೂ ಭಾಷೆ ಎಲ್ಲವನ್ನೂ ಮೀರಿದ ಮಹಾಪುರುಷರು ಎಂದು ತಿಳಿಸಿದರು.