ಡಿವಿಜಿ ಸುದ್ದಿ, ಉಡುಪಿ: ಸಾಮೂಹಿಕ ವಿವಾಹವಾಗಲು ಇಚ್ಚಿಸುವರಿಗೆ ರಾಜ್ಯ ಸರ್ಕಾರ ಬಂಪರ್ ಆಫರ್ ನೀಡಿದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ತಾನದಲ್ಲಿ ಮದುವೆಯಾದವರಿಗೆ 55 ಸಾವಿರ ನೀಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಗುರುವಾರ ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೊಳಪಡುವ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಏ.26 ರಂದು ಸಾಮೂಹಿಕ ವಿವಾಹಗಳು ನಡೆಯಲಿವೆ.
55 ಸಾವಿರ ನೆರವು
ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ನೋಂದಣಿ ಮಾಡಿಸಿಕೊಂಡ ವರನಿಗೆ ಪಂಚೆ, ಶಲ್ಯ ಖರೀದಿ ಮತ್ತು ಇತರ ಖರ್ಚಿಗೆಂದು 5 ಸಾವಿರ ವಧುವಿಗೆ ಧಾರೆ ಸೀರೆ ಖರೀದಿ ಮತ್ತು ಇತರ ಖರ್ಚಿಗೆಂದು 10 ಸಾವಿರ ಚಿನ್ನ ತಾಳಿ ಖರೀದಿಗೆ 40 ಸಾವಿರ ಹೀಗೆ ಒಟ್ಟು 55 ಸಾವಿರ ನೆರವು ನೀಡಲಾಗುವುದು ಎಂದು ತಿಳಿಸಿದರು.
ಹೆಸರು ನೋಂದಣಿಗೆ ಮಾರ್ಚ್ 27 ಕೊನೆ ದಿನ
ಈ ಮೊತ್ತವನ್ನು ವಿವಾಹದ ದಿನವೇ ವಧು–ವರರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಜಮೆ ಮಾಡಲಾಗುವುದು. ಹೆಸರು ನೋಂದಣಿಗೆ ಮಾರ್ಚ್ 27 ಕೊನೆಯ ದಿನ. ಏ.1ರಂದು ನೋಂದಾಯಿತ ವಧು–ವರರ ವಿವರಗಳನ್ನು ದೇವಾಲಯಗಳಲ್ಲಿ ಪ್ರಕಟಿಸಲಾವುದು. ಏ.6ರವರೆಗೆ ಪಟ್ಟಿಗೆ ಆಕ್ಷೇಪಣೆಗೆ ಅವಕಾಶ ಇರಲಿದೆ. 11ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.
ಉತ್ತಮ ಆದಾಯವಿರುವ 110 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ವಿವಾಹ ನೋಂದಣಿಗೆ ಎಪಿಎಲ್, ಬಿಪಿಎಲ್ ಮಾನದಂಡ ಇಲ್ಲ. ಸಾಮೂಹಿಕ ವಿವಾಹದ ಬಗ್ಗೆ ಟೋಲ್ ಫ್ರೀ ಸಂಖ್ಯೆಯನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದರು.