ಡಿವಿಜಿ ಸುದ್ದಿ, ಮಂಡ್ಯ: ಇನ್ನೂ ಮುಂದೆ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಪ್ರತಿ ತಿಂಗಗಳು ಹುಂಡಿ ಎಣಿಕೆ ಮಾಡಬೇಕು ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಮಂಡ್ಯದ ಅರ್ಕೇಶ್ವರ ದೇವಸ್ಥಾನಕ್ಕೆ ನುಗ್ಗಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿ ಹುಂಡಿ ಹಣ ಕಳವು ಮಾಡಿದ ಹಿನ್ನೆಲೆ ಇಂದು ದೇವಸ್ಥಾನಕ್ಕೆ ಭೇಟಿ ನೀಡಿದರು.

ಸಚಿವ ನಾರಾಯಣಗೌಡ ಹಾಗೂ ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಕೋಟಾ ಶ್ರೀನಿವಾಸ್ ಪೂಜಾರಿ, ದೇವಸ್ಥಾನವನ್ನು ಮೊದಲು ವೀಕ್ಷಣೆ ಮಾಡಿದರು. ನಂತರ ನಿನ್ನೆ ನಡೆದ ಘಟನೆಯ ಕುರಿತು ಮಂಡ್ಯ ಎಸ್ಪಿ ಪರಶುರಾಮ್ ಅವರ ಬಳಿ ಮಾಹಿತಿ ಪಡೆದರು. ಬಳಿಕ ಕೊಲೆಯಾದ ಮೂವರು ಅರ್ಚಕರ ಕುಟುಂಬಕ್ಕೆ ಸಾಂತ್ವನ ಹೇಳಿ, ತಲಾ ಐದು ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ್ದರು.
ನಿನ್ನೆ ಮಂಡ್ಯದಲ್ಲಿ ನಡೆದ ಘಟನೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು ಆಗಿದೆ. ಇಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಇದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಮುಜರಾಯಿ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.



