ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಎನ್ ಸಿಪಿ ಪಕ್ಷದ ಹಿರಿಯ ನಾಯಕರು ಅಸಮಾಧಾನ ಹೊರ ಹಾಕಿದ್ದು, ಮಹಾರಾಷ್ಟ್ರ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಪೃಥ್ವಿರಾಜ್ ಚವಾಣ್, ನಸೀಮ್ ಖಾನ್, ಪ್ರಣಿತಿ ಶಿಂಧೆ, ಸಂಗ್ರಾಮ್ ತೊಪ್ಟೆ, ಅಮಿನ್ ಪಟೇಲ್ ಮತ್ತು ರೋಹಿದಾಸ್ ಪಾಟೀಲ್ ಸೇರಿದಂತೆ ಹಿರಿಯ ಮುಂಖಡರು ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ಬೀಡ್ ಜಿಲ್ಲೆಯ ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ಸೋಮವಾರ ರಾತ್ರಿಯೇ ರಾಜೀನಾಮೆ ನೀಡಿದ್ದು, ನಾನು ರಾಜಕೀಯ ಮಾಡಲು ಅನರ್ಹ ಎಂದಿದ್ದಾರೆ . ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಎನ್‌ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.



