ಡಿವಿಜಿ ಸುದ್ದಿ, ಬೆಂಗಳೂರು: ನಾಳೆ ನಡೆಯುವ ಪ್ರತಿಜ್ಞಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಅನುಮತಿ ನೀಡಿದ್ದು, ಪೊಲೀಸರು ಅನಾವಶ್ಯಕವಾಗಿ ತೊಂದರೆ ಕೊಡುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕಡೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ ಎಂದು ಫೋನ್ ಬಂದಿದೆ. ಕಾರ್ಯಕರ್ತರು ದೃತಿಗೆಡಬೇಡಿ. ನಾನು ಈಗಷ್ಟೇ ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ಆಯುಕ್ತರಿಗೆ ಫೋನ್‍ನಲ್ಲಿ ಮಾತನಾಡಿದ್ದೇನೆ ಎಂದರು.
ಅಧಿಕಾರಿಗಳು ಲಿಖಿತವಾಗಿ ಅನುಮತಿ ಕೇಳುತ್ತಿದ್ದಾರೆ. ಲಿಖಿತ ಅನುಮತಿಯ ಅಗತ್ಯ ಇಲ್ಲ. ಕಾರ್ಯಕರ್ತರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಾಂತ ರೀತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಆಹ್ವಾನಿತರು ಮಾತ್ರ ಬರಬೇಕು, ಉಳಿದಂತೆ ಯಾರು ಬರಬಾರದು. ತಮ್ಮ ಕ್ಷೇತ್ರಗಳಲ್ಲೇ ಇದ್ದು ಕಾರ್ಯಕ್ರಮ ಮಾಡಬೇಕು. ಕೆಪಿಸಿಸಿ ಕಚೇರಿಯನ್ನು ಪೊಲೀಸರು ಮತ್ತು ಸೇವಾದಳದ ವಶಕ್ಕೆ ನೀಡಲಾಗಿದೆ. ತಾವಿದ್ದಲ್ಲೇ ಇದ್ದರೆ ಕಾರ್ಯಕ್ರಮ ನೇರ ಪ್ರಸಾರದಲ್ಲಿ ವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ.
ಎಲ್ಲ ಮಠದ ಮಹನೀಯರು, ಎಲ್ಲಾ ಧರ್ಮದ ಗುರು ಹಿರಿಯರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದ್ದೇನೆ. ಕಾರ್ಯಕ್ರಮಕ್ಕೆ ಬರುವವರಿಗೆ ಫೋಟೋ ಸಹಿತ ಗುರುತಿನ ಚೀಟಿ ನೀಡಲಾಗಿದೆ. ಮಾಧ್ಯಮದ ಐವತ್ತು ಮಂದಿಗೆ ಮತ್ತು ಪ್ರಧಾನ ಸಂಪಾದಕರಿಗೆ ಆಹ್ವಾನ ನೀಡಲಾಗಿದೆ ಎಂದರು.
ನನ್ನ ಮನೆಯಿಂದಲೂ ಇಬ್ಬರು, ಹೊರ ರಾಜ್ಯಗಳಿಂದ ಐದಾರು ಮಂದಿ, ದಕ್ಷಿಣ ರಾಜ್ಯಗಳಿಂದ ಒಬ್ಬೊಬ್ಬರು ಬರುತ್ತಿದ್ದಾರೆ ಮತ್ತು ಎಐಸಿಸಿ ಪ್ರಧಾನ ಕಾರ್ಯಕರ್ಶಿ ಕೆ.ಸಿ.ವೇಣುಗೋಪಾಲ್ ಭಾಗಿಯಾಗಲಿದ್ದಾರೆ ಎಂದರು.