ಡಿವಿಜಿ ಸುದ್ದಿ, ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಧಿಕ ಮಳೆ ಹಿನ್ನೆಲೆಯಲ್ಲಿ ಭಾರೀ ವಾಹನ ಓಡಾಟ ನಿಷೇಧಿಸಿದೆ.
ಆಗಸ್ಟ್ 31 ರವರೆಗೆ ಭಾರೀ ವಾಹನಗಳ ಓಡಾಟವನ್ನು ಮುಂದುವರಿಸಲಾಗಿದೆ. ಮಲ್ಟಿ ಆಕ್ಸಲ್ ಟ್ರಕ್, ಬುಲೆಟ್ ಟ್ಯಾಂಕರ್ಸ್ ಮತ್ತು ಕಂಟೈನರ್ ಲಾರಿ ಓಡಾಟವನ್ನು ನಿಷೇಧ ಮಾಡಲಾಗಿದೆ. ಜೊತೆಗೆ ಮರಳು, ಮರದ ದಿಮ್ಮಿ ಸಾಗಣೆ ವಾಹನಗಳ ಸಂಚಾರವನ್ನು ಕೂಡ ನಿಷೇಧ ಮಾಡಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆಯೇ ಜಿಲ್ಲೆಯಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಿಂದ ಆಗಸ್ಟ್ 10 ವರೆಗೆ ನಿಷೇಧಿಸಲಾಗಿತ್ತು. ಮರಳು, ಮರದ ದಿಮ್ಮಿ ಸಾಗಾಣಿಕೆ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಈಗ ಮಳೆ ಜೋರಾದ ಹಿನ್ನೆಲೆಯಲ್ಲಿ ವಾಹನಗಳ ಓಡಾಟದ ಮೇಲಿನ ನಿಷೇಧವನ್ನು ಮುಂದುವರಿಸಲಾಗಿದೆ.
ಧಾರಾಕಾರ ಮಳೆ ಹಿನ್ನೆಲೆ ಸೋಮವಾರಪೇಟೆ ಒಂದರಲ್ಲೇ 600ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. 5 ಟ್ರಾನ್ಸ್ ಫಾರ್ಮರ್‌ಗಳು ಹಾಗೂ ಮೂರು ಕಿಮೀ ಉದ್ದದ ವಿದ್ಯುತ್ ತಂತಿ ನಷ್ಟವಾಗಿದೆ. ಇತ್ತ ವಿರಾಜಪೇಟೆ ವಿಭಾಗದಲ್ಲಿ ಮೂರು ಕೋಟಿಗೂ ಅಧಿಕ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.



