ಡಿವಿಜಿ ಸುದ್ದಿ, ಕಲಬುರ್ಗಿ: ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಲ್ಲಿ ಆಡಳಿತ ನೋಡಿಕೊಳ್ಳಲು ಕೆಎಎಸ್ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ನೇಮಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿವರೆಗೆ ಉಪನ್ಯಾಸಕರನ್ನೇ ಕುಲಸಚಿವ ಸ್ಥಾನಕ್ಕೆ ನೇಮಿಸಲಾಗುತ್ತಿತ್ತು. ಇದರಿಂದ ಅವರ ಕ್ಲಾಸ್ ಗಳಿಗೆ ತೊಂದರೆ ಆಗುತ್ತಿತ್ತು. ಹೀಗಾಗಿ ಉಪನ್ಯಾಸಕರನ್ನು ಆಡಳಿತಾತ್ಮಕ ಹೊಣೆಯಿಂದ ಬಬಿಡುಗಡೆಗೊಳಿಸಿ ಬೋಧನೆಗೆ ಸೀಮಿತಗೊಳಿಸಲಾಗುವುದು. ಈ ಹುದ್ದೆಗೆ ಕೆಎಎಸ್ ಅಧಿಕಾರಿಗಳನ್ನು ಕುಲ ಸಚಿವರನ್ನಾಗಿ ನೇಮಿಸಲಾಗುವುದು ಎಂದು ತಿಳಿಸಿದರು.
ಕಳೆದ ಎಂಟು ತಿಂಗಳಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಖಾಲಿ ಇದೆ. ಮುಂದಿನ ಒಂದು ತಿಂಗಳಲ್ಲಿ ಕುಲಪತಿಯನ್ನು ನೇಮಿಸಲಾಗುವುದು. 183 ಬೋಧಕ ಹಾಗೂ 350 ಬೋಧಕೇತರ ಹುದ್ದೆಗಳು ಖಾಲಿ ಉಳಿದಿವೆ. ಎರಡು ವರ್ಷಗಳ ಹಿಂದೆ 80 ಬೋಧಕ ಹುದ್ದೆಗಳ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿತ್ತು. ಕೂಡಲೇ ಇವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.
ಗುಲಬರ್ಗಾ ಸಂಸದ ಡಾ.ಉಮೇಶ್ ಜಾಧವ್, ಬೀದರ್ ಸಂಸದ ಭಗವಂತ ಖೂಬಾ, ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ್ ಜಾಧವ್, ದತ್ತಾತ್ರೇಯ ಪಾಟೀಲ, ಎಂ.ವೈ.ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ, ಮುಖಂಡ ಶಶೀಲ್ ಜಿ.ನಮೋಶಿ ಇದ್ದರು.