ಡಿವಿಜಿ ಸುದ್ದಿ, ಬೆಂಗಳೂರು: ರಷ್ಯಾದ ಮಾಸ್ಕೋದಲ್ಲಿ ಸಿಲುಕಿದ್ದ 170 ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಇಂದ ಬೆಳಗ್ಗೆ 4.30ಕ್ಕೆ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ.
ವಿಮಾನ ನಿಲ್ದಾಣದಿಂದ ವಿದ್ಯಾರ್ಥಿಗಳನ್ನು ವಸತಿ ಗೃಹಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ರಷ್ಯಾದಲ್ಲಿ ಭಾರೀ ಪ್ರಮಾಣದಲ್ಲಿ ಕೋವಿಡ್-19 ಹರಡುತ್ತಿದ್ದರಿಂದ ಕಳೆದ 3 ತಿಂಗಳಿಂದ ರಾಜ್ಯಕ್ಕೆ ಬರಲು ಪ್ರಯತ್ನಿಸುತ್ತಿದ್ದರು. ಕೇಂದ್ರ ಸಚಿವರು, ಸಂಸದರು, ರಾಜ್ಯದ ಮಂತ್ರಿಗಳು, ಶಾಸಕರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದರು.
ಸೋಮವಾರ ಸಂಜೆ 6 ರಿಂದ ಮಾಸ್ಕೋದಿಂದ ಹೊರಟ ಒಟ್ಟು 227 ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದಿಳಿದಿದ್ದಾರೆ. ಇವರಲ್ಲಿ ರಾಜ್ಯದ 170 ವಿದ್ಯಾರ್ಥಿಗಳು ರಾಜ್ಯದವರಾಗಿದ್ದು, ಇನ್ನುಳಿದವರು ಆಂಧ್ರಪ್ರದೇಶ, ತಮಿಳುನಾಡು, ಕೇರಳದವರಾಗಿದ್ದಾರೆ.
170 ವಿದ್ಯಾರ್ಥಿಗಳಲ್ಲಿ ದಾವಣಗೆರೆ ಜಿಲ್ಲೆಯ 11 ವಿದ್ಯಾರ್ಥಿಗಳು ಸೇರಿದ್ದರು. ಈ ವಿದ್ಯಾರ್ಥಿಗಳು ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲ ದೇಶಕ್ಕೆ ವಾಪಸ್ ಬರಲು ವ್ಯವಸ್ಥೆ ಮಾಡುವಂತೆ ಕೋರಿದ್ದರು. . ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಸಂಸದ ಸಿದ್ದೇಶ್ವರ್, ಜುಲೈ 1ರಂದು ವಿದೇಶಾಂಗ ಸಚಿವ ಜೈಶಂಕರ್ ಹಾಗೂ ವಿಮಾನಯಾನ ಸಚಿವ ಹರದೀಪ್‌ಸಿಂಗ್ ಪುರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಬೆಂಗಳೂರು, ದಾವಣಗೆರೆ, ತುಮಕೂರು, ಹುಬ್ಬಳ್ಳಿ, ಗಂಗಾವತಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ವಿಮಾನದಲ್ಲಿ ಬಂದಿದ್ದಾರೆ.



