ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಲಾಕ್‌ಡೌನ್ ವೇಳೆ ಆದಾಯ ಇಲ್ಲದೆ ಸಂಕಷ್ಟಕ್ಕೆ ತುತ್ತಾಗಿದ್ದ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 33,000 ಕೋಟಿ ಸಾಲ ಪಡೆಯಲು ನಿರ್ಧಾರ ಕೈಗೊಂಡಿದೆ.
ಇಂದು ಸಚಿವ ಸಂಪುಟ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದ್ದು, ರಾಜ್ಯಗಳು ಸಾಲ ಪಡೆಯುವ ಪ್ರಮಾಣ ಜಿಎಸ್‌ಡಿಪಿ ಪ್ರಮಾಣವನ್ನು ಶೇ 3 ರಿಂದ ಶೇ 5 ಕ್ಕೆ ಕೇಂದ್ರ ಸರ್ಕಾರ ಹೆಚ್ಚಿಸಿದೆ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.

ಒಂದು ಸಲಕ್ಕೆ ಮಾತ್ರ ಹೆಚ್ಚುವರಿ ಸಾಲ ಪಡೆಯಲು ನಿರ್ಧರಿಸಲಾಗಿದೆ. ಕೇಂದ್ರ ಸಾಲ ಪಡೆಯುವ ಪ್ರಮಾಣ ಶೇ 5 ಕ್ಕೆ ಹೆಚ್ಚಿಸಿದ್ದರಿಂದ ರಾಜ್ಯವು 36,000 ಕೋಟಿ ಸಾಲ ಪಡೆಯಬಹುದು. ಆದರೆ, ರಾಜ್ಯ ಸರ್ಕಾರ 33,000 ಕೋಟಿ ಸಾಲ ಪಡೆಯಲು ನಿರ್ಧರಿಸಿದೆ ಎಂದು ಹೇಳಿದರು.
ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳು ಸಾಲ ಪಡೆಯುವಂತೆ ನೀಡಿರುವ ಸಲಹೆಗೂ ರಾಜ್ಯ ಸರ್ಕಾರ ಪಡೆಯುತ್ತಿರುವ ಸಾಲಕ್ಕೂ ಸಂಬಂಧವಿಲ್ಲ. ಜಿಎಸ್‌ಟಿ ಪರಿಹಾರ 11,000 ಕೋಟಿ ಕೊಡಬೇಕು ಎಂಬ ರಾಜ್ಯದ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.



