ಡಿವಿಜಿ ಸುದ್ದಿ, ಬೆಂಗಳೂರು: ಅಕ್ರಮ ಆಸ್ತಿ ಹೊಂದಿದ ಆರೋಪದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಲ್. ಸತೀಶ್ ಕುಮಾರ್ ಸೇರಿದಂತೆ ನಾಲ್ವರು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಒಟ್ಟು 14 ಕಡೆ ಏಕಕಾಲದಲ್ಲಿ ದಾಳಿನಡೆದಿದೆ. ಶ್ರೀನಿವಾಸಪುರ ವಲಯದ ವಲಯ ಅರಣ್ಯಾಧಿಕಾರಿ ಎನ್,ರಾಮಕೃಷ್ಣ, ರಾಯಚೂರು ಜಿಲ್ಲಾಧಿಕಾರಿ ಕಚೇರಿ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್ ಗೋಪಶೆಟ್ಟಿ ಮಲ್ಲಿಕಾರ್ಜನ ಮತ್ತು ಕೃಷ್ಣಭಾಗ್ಯ ಜಲ ನಿಗಮದ ಸಹಾಯಕ ಎಂಜಿನಿಯರ್ ರಾಘಪ್ಪ ಲಾಲಪ್ಪ ಲಮಾಣಿ ಅವರ ಮನೆ ಮತ್ತು ಕಚೇರಿಗಳಲ್ಲೂ ಶೋಧ ನಡೆಯುತ್ತಿದೆ.
ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಸತೀಶ್ ಕುಮಾರ್ ಅವರ ಡಾಲರ್ಸ್ ಕಾಲೋನಿ ಬಾಡಿಗೆ ಮನೆ, ಗಾಂಧಿನಗರ ತೆರಿಗೆ ಭವನದಲ್ಲಿರುವ ಕಚೇರಿ ಹಾಗೂ ಮೈಸೂರಿನ ಸ್ವಂತ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಇನ್ನು ಶ್ರೀನಿವಾಸಪುರ ವಲಯದ ವಲಯ ಅರಣ್ಯಾಧಿಕಾರಿ ರಾಮಕೃಷ್ಣ ಅವರ ಬಂಗಾರಪೇಟೆ ವಿಜಯನಗರದ ಮನೆ, ಕೋಲಾರ ಜಿಲ್ಲೆ ಮಿಟ್ಟಗಳ್ಳಿ ಗ್ರಾಮದ ಮನೆ, ಬೆಂಗಳೂರಿನ ವಾಸದ ಮನೆ ಹಾಗೂ ಕಸ್ತೂರಿ ನಗರದ ಸ್ನೇಹಿತರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಗೋಪಶೆಟ್ಟಿ ಮಲ್ಲಿಕಾರ್ಜುನ ಅವರಿಗೆ ಸೇರಿದ ರಾಯಚೂರಿನ ಮಂತ್ರಾಲಯ ರಸ್ತೆ ಮನೆ, ಲಿಂಗಸುಗೂರು ರಸ್ತೆಯಲ್ಲಿ ಪತ್ನಿ ಹೆಸರಿನಲ್ಲಿರುವ ಪೆಟ್ರೋಲ್ ಬಂಕ್, ರಾಯಚೂರು– ಲಿಂಗಸುಗೂರು ಹೆದ್ದಾರಿಯಲ್ಲಿರುವ ನಾಗಭೂಷಣ್ ಟ್ರ್ಯಾಕ್ಟರ್ ಶೋ ರೂಮ್ ನಲ್ಲಿ ಶೋಧ ನಡೆದಿದೆ.
ಈ ಎಲ್ಲಾ ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ದೂರಿನ ಅನ್ವಯ ದಾಳಿ ನಡೆದಿದೆ.



