ಡಿವಿಜಿ ಸುದ್ದಿ, ಕಲಬುರಗಿ: ತೊಗರೆ ನಾಡು, ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಅದ್ಧೂರಿಯಾಗಿ ನಡೆಯಿತು. ಈ ಮೂಲಕ 3 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪುಷ್ಪದಿಂದ ಅಲಂಕಾರಗೊಂಡಿದ್ದ ರಥದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರನ್ನು ಕೂರಿಸಿ ಮೆರವಣಿಗೆ ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕನ್ನಡಾಭಿಮಾನಿಗಳು ಕನ್ನಡಪರ ಘೋಷಣೆ ಕೂಗಿದರು. ಎತ್ತ ನೋಡಿದರು ಕನ್ನಡ ಬಾವುಟ ಹಾರಾಡುತ್ತಿದ್ದವು. ಸಮ್ಮೇಳನಾಧ್ಯಕ್ಷರ ರಥದ ಮುಂದೆ ವಿವಿಧ ಕಲಾತಂಡಗಳು ನೃತ್ಯ ಪ್ರದರ್ಶನ ನಡೆಸಿದರು. ಡಾ.ಎಸ್.ಎಂ. ಪಂಡಿತ ರಂಗಮಂದಿರದಿಂದ ಆರಂಭಗೊಂಡ ಮೆರವಣಿಗೆಯು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದ ಪ್ರಧಾನ ವೇದಿಕೆಗೆ ತಲುಪಿತು.
ತುಂಬಾ ಉತ್ಸಾಹದಿಂಣದ ಭಾಗಿಯಾಗಿದ್ದ ಕನ್ನಡ ಮನಸ್ಸುಗಳು, ಕನ್ನಡ ಹಬ್ಬವನ್ನು ಸಂಭ್ರಮದಿಂದ ಕಣ್ಣು ತುಂಬಿಕೊಂಡರು. ಎಲ್ಲಿ ನೋಡಿದರು ಹಳದಿ-ಕೆಂಪು ಬಣ್ಣದ ಕನ್ನಡ ಧ್ವಜಗಳ ಹಾರಾಡುತ್ತಿದ್ದವು. ಪೌರಾಣಿಕ, ಐತಿಹಾಸಿಕ ವ್ಯಕ್ತಿಗಳ ವೇಶಭೂಷಣ ತೊಟ್ಟ ಕನ್ನಡಿಗರ ನುಡಿ ತೇರು ನೋಡುವುದೇ ಒಂದು ಆನಂದವಾಗಿತ್ತು.
ಕೊಪ್ಪಳ, ಗದಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರ, ಆಂಧ್ರ ಗಡಿನಾಡು ಘಟಕ, ಹಾಸನ, ಉಡುಪಿ ಒಟ್ಟು 60 ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಡೊಳ್ಳು ಕುಣಿತ, ಹಲಿಗೆ ವಾದನ, ದೊಡ್ಡಾಟ ಕುಣಿತ, ಕರಡಿ ಮಜಲು ಮತ್ತು ಚಮವಾದ್ಯ, ಲಂಬಾಣಿ ಕುಣಿತ, ಪುರವಂತಿಕೆ, ರಣಕಹಳೆ, ಗೊಂಬೆ ಕುಣಿತ, ಪೋತರಾಜ ಕುಣಿತ, ಭಜನಾ ಮಂಡಳಿ, ಮಹಿಳಾ ವೀರ ಗಾಸೆ, ಸಂಬಳ ವಾದ್ಯ, ಮೋಜಿನ ಕುಣಿತ, ವೀರಭದ್ರ ಕುಣಿತದ ನೋಡುಗರನ್ನು ರಂಜಿಸಿತು.