ಡಿವಿಜಿ ಸುದ್ದಿ, ಕನಕಪುರ: ತಾಲ್ಲೂಕಿನ ಹಾರೋಬೆಲೆ ಗ್ರಾಮದಲ್ಲಿ ಏಸು ಪ್ರತಿಮೆ ಅನಾವರಣ ಮಾಡಿದ್ದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆ ಫೇಸ್ ಬುಕ್ ಮೂಲಕ ಉತ್ತರ ಕೊಟ್ಟರುವ ಡಿ.ಕೆ.ಶಿವಕುಮಾರ್ , ಸಂವಿಧಾನ ಸುಡಲು ಮುಂದಾದ ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಜರೂರತ್ತು ನನಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ತಾಲ್ಲೂಕಿನ ಹಾರೋಬೆಲೆ ಗ್ರಾಮದ ಬಳಿ ಕ್ರಿಸ್ ಮಸ್ ಹಬ್ಬದ ದಿನ 114 ಅಡಿ ಎತ್ತರದ ಏಸು ಪ್ರತಿಮೆ ನಿರ್ಮಾಣಕ್ಕೆ ಜಮೀನು ನೀಡಿ ಶಿಲಾನ್ಯಾಸ ನೆರವೇರಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸೇರಿದಂತೆ ನೆಟ್ಟಿಗರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಫೇಸ್‌ಬುಕ್‌ನಲ್ಲಿಯೇ ಪೋಸ್ಟ್ ಮಾಡಿ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ.
ಡಿ.ಕೆ. ಶಿವಕುಮಾರ್ ಫೇಸ್ ಬುಕ್ ಪೋಸ್ಟ್ ನಲ್ಲಿ ಏನಿದೆ.?
ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಭದ್ರ ಬುನಾದಿಯಾದ ಸಮಾನತೆ ಮತ್ತು ಸರ್ವಧರ್ಮ ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟಿರುವವನು ನಾನು. ನನ್ನನ್ನು ಏಳು ಬಾರಿ ಗೆಲ್ಲಿಸಿರುವ ಕನಕಪುರ ಕ್ಷೇತ್ರದಲ್ಲಿ ಎಲ್ಲ ಜಾತಿ, ಧರ್ಮದ ಜನರೂ ಇದ್ದಾರೆ. ಅವರ ಭಾವನೆಗಳನ್ನು ಗೌರವಿಸುವುದು ನನ್ನ ಧರ್ಮ. ಏಸು ಪ್ರತಿಮೆಗೆ ಜಾಗ ಕೊಟ್ಟಿರುವುದಷ್ಟೇ ಅಲ್ಲ, ನಾನು ಸಚಿವನಾಗಿದ್ದಾಗ ಕೆಂಪೇಗೌಡ ಪ್ರಾಧಿಕಾರ ರಚನೆಯಾಗಿದೆ. ಮೆಯೋಹಾಲ್‌ನಲ್ಲಿ ಕಚೇರಿ ಸ್ಥಾಪನೆಯಾಗಿ, ಬೆಂಗಳೂರಿನಲ್ಲಿ ಐದು ಎಕರೆ ಜಮೀನು ಮಂಜೂರಾಗಿದೆ. ಕೆಂಪೇಗೌಡ ಜಯಂತಿ ಆಚರಣೆ, ತನ್ನಿಮಿತ್ತ ಸರಕಾರಿ ರಜೆ ಘೋಷಣೆ ಮಾಡಿಸಿದ್ದೇನೆ. ಆದಿಚುಂಚನಗಿರಿ ಶ್ರೀ ದಿವಂಗತ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರು ರಾಮನಗರದ ಬಿಡದಿಯ ಬಾಣಂದೂರು ಹಾಗೂ ಸಿದ್ದಗಂಗಾ ಶ್ರೀಗಳಾದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ರಾಮನಗರದ ಮಾಗಡಿ ಗ್ರಾಮದ ಪ್ರಗತಿಗೆ ತಲಾ 25 ಕೋಟಿ ರುಪಾಯಿ ನಮ್ಮ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಂಜೂರಾಗಿದೆ. ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಸಾಹೇಬರ ಸಂವಿಧಾನ ಸುಡಲು ಮುಂದಾದ ಅಲ್ಪರಿಂದ ಪಾಠ ಹೇಳಿಸಿಕೊಳ್ಳುವ ಜರೂರತ್ತು ನನಗಿಲ್ಲ ಎಂದಿದ್ದಾರೆ.



