ಕೊಲಂಬೊ: ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಎರಡು ಬಾರಿ ಮುಂದೂಡಿದ್ದ ಶ್ರೀಲಂಕಾದ ಸಂಸತ್ ಚುನಾವಣೆ ಆಗಸ್ಟ್ 5ರಂದು ನಡೆಯಲಿದೆ ಎಂದು ಶ್ರೀಲಂಕಾದ ರಾಷ್ಟ್ರೀಯ ಚುನಾವಣಾ ಆಯೋಗದ ಅಧ್ಯಕ್ಷ ಮಹಿಂದಾ ದೇಶಪ್ರಿಯ ಬುಧವಾರ ಹೇಳಿದ್ದಾರೆ.
ಆಯೋಗದ ಸಭೆಯಲ್ಲಿ ಆಗಸ್ಟ್ 5ರಂದು ಚುನಾವಣೆ ನಡೆಸುವ ಕುರಿತು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ. ಶ್ರೀಲಂಕಾದ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಅವರು ಪ್ರತಿಪಕ್ಷ ನಿಯಂತ್ರಿತ ಸಂಸತ್ತನ್ನು ಮಾರ್ಚ್ 2ರಂದು ವಿಸರ್ಜಿಸಿದ್ದರು.
ನಿಗದಿತ ಸಮಯಕ್ಕಿಂತ ಆರು ತಿಂಗಳು ಮುನ್ನವೇ ಸಂಸತ್ ವಿಸರ್ಜಿಸಿ ಚುನಾವಣೆಗೆ ಕರೆಕೊಟ್ಟಿದ್ದರು. ಕೊರೊನಾ ಕಾರಣದಿಂದ ಚುನಾವಣಾ ಆಯೋಗವು, ಜೂನ್ 20ಕ್ಕೆ ಚುನಾವಣೆಯನ್ನು ಮುಂದೂಡಿತ್ತು. ಆದರೆ, ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿದ್ದರಿಂದ ಜೂನ್ 20ರಂದು ಮತದಾನ ನಡೆಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಇದೀಗ ಆಗಸ್ಟ್ 5 ರಂದು ಚುನಾವಣೆ ನಡೆಯಲಿದೆ.